ನೆಲಮಂಗಲ: ನೀನು ಗಂಡಸು ಆಗಿದ್ದರೆ ಪೊಲೀಸರ ಮೇಲೆ ಹಲ್ಲೆ ಮಾಡು ಎಂದು ತಾಯಿ ಹೇಳಿದ ಮಾತಿಗೆ ಪ್ರಚೋದನೆಗೊಂಡ ಮಗ ನಿಜವಾಗಿಯೂ ಥಳಿಸಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮುಕ್ತಿನಾಥೇಶ್ವರ ಬಡಾವಣೆಯಲ್ಲಿ ನಡೆದಿದೆ. ತಾಯಿಯ ಮಾತಿನಿಂದ ಪ್ರಚೋದನೆಗೊಂಡ ಮಧುಸೂದನ್ ಎಂಬ ಯುವಕ ಮಹಿಳಾ ಪಿಎಸ್ಐ (PSI) ಮೇಲೆ ಹಲ್ಲೆ ಮಾಡಿದ್ದಾನೆ.
ಆರೋಪಿ ಮಧುಸೂದನ್ ಬಿಇ ಡ್ರಾಪ್ ಔಟ್ ಆಗಿದ್ದ. ಹೀಗಾಗಿ ಆತನಿಗೆ ಕೆಲಸ ಇರಲಿಲ್ಲ. ಇದರಿಂದಾಗಿ ತಾಯಿ ಸುಶೀಲಮ್ಮ ಮತ್ತು ಮಗನ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ತಾಯಿ ಸುಶೀಲಮ್ಮ ಮಗನ ವಿರುದ್ಧ ನೆಲಮಂಗಲ ಟೌನ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಇಬ್ಬರನ್ನೂ ಪೊಲೀಸರು ವಿಚಾರಣೆಗೆ ಕರೆಯಿಸಿದ್ದರು. ಈ ವೇಳೆ ತಾಯಿ ಹಾಗೂ ಮಗನ ಮಧ್ಯೆ ಜಗಳ ನಡೆದಿದೆ. ಆಗ ಮಹಿಳಾ ಪಿಎಸ್ ಐ ಜಯಂತಿ, ಮಧುಸೂದನ್ ಗೆ ಗದರಿಸಿ ಒಂದೇಟು ಹಾಕಿದ್ದಾರೆ.
ಆಗ ತಾಯಿ ಸುಶೀಲಮ್ಮ, “ದೂರು ಕೊಟ್ಟು ಪೊಲೀಸರಿಂದ ಹೊಡೆಸಿದರೇ, ಪೊಲೀಸರಿಗೆ ತಿರುಗಿ ಹೊಡೆಯುತ್ತೇನೆ ಅಂದಿದ್ದೆಲ್ಲ. ಈಗ ಹೊಡಿ ನೋಡೋಣ. ನೀನು ಗಂಡಸಾಗಿದ್ದರೆ ಪೊಲೀಸರಿಗೆ ಹೊಡೆದು ತೋರಿಸು ಎಂದು ಪ್ರಚೋದಿಸಿದ್ದಾರೆ. ಆಗ ಪ್ರಚೋದನೆಗೊಂಡ ಮಧುಸೂದನ್ ಮಹಿಳಾ ಪಿಎಸ್ಐ ಜಯಂತಿ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಹಲ್ಲೆಗೊಳಗಾದ ಮಹಿಳಾ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಧಿಸಿದಂತೆ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.