ಬೆಂಗಳೂರು: ಇಲ್ಲಿಯ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ದೊಡ್ಡ ದುರಂತವೇ ಸಂಭವಿಸಿದೆ. ಸದ್ಯ ಇಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊರಮಾವು ಉಪವಿಭಾಗದ ಎಇಇ ಕೆ.ವಿನಯ್ ಎಂಬುವವರನ್ನು ಅಮಾನತು ಮಾಡಲಾಗಿದೆ.
ಕಟ್ಟಡ ತೆರವಿಗೆ ಸ್ಥಿರೀಕರಣ ಆದೇಶ ಹೊರಡಿಸಿದ್ದರೂ ಎಇಇ ಕೆ.ವಿನಯ್ ನಿಗದಿತ ಅವಧಿಯೊಳಗೆ ಕ್ರಮಕೈಗೊಂಡಿಲ್ಲ. ನಿರ್ಲಕ್ಷ್ಯ 8 ಕಾರ್ಮಿಕರ ಸಾವಿಗೆ ಕಾರಣಕರ್ತರಾಗಿದ್ದಾರೆ. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಹೇಳಿದ್ದಾರೆ.
ಕಟ್ಟಡ ಮಾಲೀಕ ಮುನಿರಾಜ್ ರೆಡ್ಡಿಗೆ ಬಿಬಿಎಂಪಿ ಅಧಿಕಾರಿಗಳು ಮೂರು ಬಾರಿ ನೋಟಿಸ್ ನೀಡಿದ್ದರು. ಏಪ್ರಿಲ್ ನಲ್ಲೇ ಕಟ್ಟಡ ನಿರ್ಮಾಣದ ಕುರಿತು ಬಿಬಿಎಂಪಿ ನೋಟಿಸ್ ನೀಡಿದರೂ ಮಾಲೀಕ ಯಾವುದೇ ಉತ್ತರ ನೀಡಿರಲಿಲ್ಲ.
ಹೀಗಾಗಿ ಮಾಲೀಕರ ಮೇಲೆಯೂ ಎಫ್ ಐಆರ್ ದಾಖಲಾಗಿದೆ. 40X60 ಅಳತೆಯಲ್ಲಿ ನಕ್ಷೆ ಮುಂಜೂರಾತಿ ಪಡೆಯದೆ ಮುನಿರಾಜ್ ರೆಡ್ಡಿ ಕಟ್ಟಡ ನಿರ್ಮಿಸುತ್ತಿದ್ದ. 3 ಅಂತಸ್ತಿನ ಕಟ್ಟಡ ಕಟ್ಟುವಾಗಲೇ ಪಾಲಿಕೆ ದಾಖಲೆ ಕೇಳಿತ್ತು. ಅಧಿಕಾರಿಗಳು ಹಾಗೂ ಮಾಲೀಕರ ನಿರ್ಲಕ್ಷ್ಯದ ಮಧ್ಯೆ ಅಮಾಯಕ ಬಡ ಜೀವಗಳು ಬಲಿಯಾಗಿದ್ದಕ್ಕೆ ಇಡೀ ನಾಡೇ ಆಕ್ರೋಶ ವ್ಯಕ್ತಪಡಿಸುತ್ತಿದೆ.