ಬೆಂಗಳೂರು: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನ ಆಪರೇಷನ್ ಯಶಸ್ಸು ಕಂಡಿದ್ದು, ಸಿ.ಪಿ. ಯೋಗೇಶ್ವರ್ ಕೊನೆಗೆ ಕೈ ತೆಕ್ಕೆಗೆ ಬಿದ್ದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಿ.ಪಿ. ಯೋಗೇಶ್ವರ್ ಅವರು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಪಕ್ಷ ಸೇರುವುದಕ್ಕೂ ಮುನ್ನ ಸಿ.ಪಿ. ಯೋಗೇಶ್ವರ್ ಅವರು ರಹಸ್ಯ ಸ್ಥಳಕ್ಕೆ ತೆರಳಿ ಚರ್ಚೆ ನಡೆಸಿದ್ದರು. ಆನಂತರ ಮಧ್ಯರಾತ್ರಿ ಖಾಸಗಿ ಹೊಟೇಲಿನಲ್ಲಿ ಡಿಕೆಶಿಯನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭೇಟಿ ವೇಳೆ ಇಂದು ಬೆಳಗ್ಗೆ ಸಿಎಂ ನಿವಾಸದಲ್ಲಿ ಪಕ್ಷ ಸೇರ್ಪಡೆಗೆ ಸಿಪಿವೈಗೆ ಡಿಕೆಶಿ ಮನವಿ ಮಾಡಿದ್ದರು ಎನ್ನಲಾಗಿದೆ. ಅದರಂತೆ ಇಂದು ಬೆಳಗ್ಗೆಯೇ ಡಿಕೆಶಿ ನಿವಾಸಕ್ಕೆ ಯೋಗೀಶ್ವರ್ ತೆರಳಿ ಜೊತೆಯಾಗಿ ಸಿಎಂ ನಿವಾಸಕ್ಕೆ ಆಗಮಿಸಿದ್ದರು. ಈ ಮೂಲಕ ಕಾಂಗ್ರೆಸ್ ಎನ್ ಡಿಎಗೆ ಟಾಂಗ್ ಕೊಟ್ಟಿದೆ.
ಸಿಪಿ ಯೋಗೇಶ್ವರ್ ಅವರನ್ನು ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡಿಸಲು ಬಿಜೆಪಿ ಮುಂದಾಗಿತ್ತು. ಬಿಜೆಪಿ ರಾಷ್ಟ್ರೀಯ ನಾಯಕರ ಮೂಲಕ ಯೋಗೇಶ್ವರ್ ಮನವೊಲಿಕೆಗೆ ಜೆಡಿಎಸ್ ಕೂಡ ಕಸರತ್ತು ನಡೆಸಿತ್ತು. ಆದರೆ, ಆ ಪ್ರಯತ್ನಕ್ಕೆ ಯೋಗೇಶ್ವರ್ ಸೊಪ್ಪು ಹಾಕಲಿಲ್ಲ. ಹೀಗಾಗಿ ಜೆಡಿಎಸ್ ಈಗ ಯೋಗೇಶ್ವರ್ ವಿರುದ್ಧ ಮಾತನಾಡುತ್ತಿದ್ದು, ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ.
1999ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ಯೋಗೇಶ್ವರ್, 2004 ಮತ್ತು 2008 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2013 ರಲ್ಲಿ ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿದ್ದ ಯೋಗೇಶ್ವರ್ 2018 ಮತ್ತು 2023 ರ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಸೋಲು ಕಂಡಿದ್ದರು. 2023 ರ ಚುನಾವಣೆಯಲ್ಲಿ ಕುಮಾರಸ್ವಾಮಿ 96,592 ಮತಗಳನ್ನು ಪಡೆದರೆ ಯೋಗೇಶ್ವರ್ 80,677 ಮತ ಪಡೆದಿದ್ದರು. ಈಗ ಮತ್ತೆ ಜೆಡಿಎಸ್ ಗೆ ಠಕ್ಕರ್ ಕೊಡಲು ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಿದ್ದಾರೆ.