ನವದೆಹಲಿ: ಜಗತ್ತಿನ ಎಲ್ಲೆಡೆ ಆನ್ ಲೈನ್ ಪೇಮೆಂಟ್ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಮಧ್ಯೆ ಭಾರತದ ಪೇಮೆಂಟ್ ಸಿಸ್ಟಂ ಯುಪಿಐ ಅನ್ನು ಮಾಲ್ಡೀವ್ಸ್ ಕೂಡ ಒಪ್ಪಿಕೊಂಡಿದೆ.
ಹಣಕಾಸು ವಹಿವಾಟು ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲು ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ನ್ನು ಜಾರಿ ಮಾಡುತ್ತಿರುವುದಾಗಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ತಿಳಿಸಿದ್ದಾರೆ. ಈ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಭಾರತದ ಯುಪಿಐ ಅಳವಡಿಕೆಯಿಂದ ಹಣಕಾಸು ಒಳಗೊಳ್ಳುವಿಕೆ, ವಹಿವಾಟು ಕ್ಷಮತೆ ಹೆಚ್ಚಿಸಬಹುದು. ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ನ್ನು ಉನ್ನತೀಕರಿಸಬಹುದು. ಹೀಗಾಗಿ, ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಸಿಸ್ಟಂ ನ್ನು ಅಳವಡಿಸುವುದು ಉತ್ತಮ ಎಂದು ಮಾಲ್ಡೀವ್ಸ್ನ ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವರು ಪ್ರಸ್ತಾವನೆ ಮಾಡಿದ್ದರು. ಹೀಗಾಗಿ ಅಲ್ಲಿನ ಅಧ್ಯಕ್ಷರು ಅಧಿಕೃತವಾಗಿ ಯುಪಿಐ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ ಎಂದಿದ್ದಾರೆ.
ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಪ್ರೊಫೆಸರ್ ಪೌಲ್ ಮೈಕೇಲ್ ರೋಮರ್ ಅವರು ಭಾರತದ ಹಣಕಾಸು ವಹಿವಾಟು ವ್ಯವಸ್ಥೆಯನ್ನು ಶ್ಲಾಘಿಸಿದ್ದರು. ಭಾರತದ ಆಧಾರ್, ಯುಪಿಐನಂತಹ ವ್ಯವಸ್ಥೆಯನ್ನು ಇತರ ಅಭಿವೃದ್ದಿಶೀಲ ದೇಶಗಳು ಅನುಕರಿಸಬೇಕು ಎಂದಿದ್ದರು. ಈ ಮಧ್ಯೆ ಮಾಲ್ಡೀವ್ಸ್ ಅಧ್ಯಕ್ಷರು ಭಾರತದ ಯುಪಿಐಗೆ ಒಪ್ಪಿಗೆ ಸೂಚಿಸಿದ್ದಾರೆ.