ಬೆಂಗಳೂರು: ಹೈಕಮಾಂಡ್ ಸೂಚಿಸಿದರೆ, ಚನ್ನಪಟ್ಟಣದಲ್ಲಿ ನಾನು ಸ್ಪರ್ಧಿಸುವೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಇಲ್ಲಿಯವರೆಗೆ ನಾನು ಸ್ಪರ್ಧಿಸುವುದಿಲ್ಲ ಎಂದಿದ್ದ ಡಿಕೆ ಸುರೇಶ್ ಈಗ ಸ್ಪರ್ಧಿಸುವ ಮನಸ್ಸು ಮಾಡಿದ್ದಾರೆ.
ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾನು ಅಭ್ಯರ್ಥಿಗಿಂತ ಕಾರ್ಯಕರ್ತನಾಗಿ ಕೆಲಸ ಮಾಡುವುದರಲ್ಲಿ ಹೆಚ್ಚು ಖುಷಿ ಕಾಣುತ್ತೇನೆ. ಪಕ್ಷವು ಎರಡು, ಮೂರು ದಿನಗಳಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಪಕ್ಷದ ವರಿಷ್ಠರೆಲ್ಲ ಬದ್ಧವಾಗಿದ್ದೇವೆ” ಎಂದಿದ್ದಾರೆ.
ನನ್ನ ಆಚಾರ ವಿಚಾರಗಳನ್ನು ಪಕ್ಷದ ಮುಖಂಡರ ಗಮನಕ್ಕೆ ತರುತ್ತೇನೆ. ನಾನು ಅಧಿಕಾರಕ್ಕೋಸ್ಕರ ಚುನಾವಣೆಗೆ ನಿಲ್ಲಬೇಕು ಎನ್ನುವ ಉದ್ದೇಶ ಹೊಂದಿರುವವನಲ್ಲ. ಪಕ್ಷಕ್ಕೆ ನಾನು ಅನಿವಾರ್ಯವಲ್ಲ. ನನಗೆ ಪಕ್ಷ ಅನಿವಾರ್ಯ” ಎಂದು ಹೇಳಿದರು. ಕಾರ್ಯಕರ್ತರು ಪಕ್ಷಕ್ಕೆ ನೀವೇ ಅನಿವಾರ್ಯ ಎಂದು ಹೇಳುತ್ತಿರುವ ಬಗ್ಗೆ ಕೇಳಿದಾಗ “ಕಾರ್ಯಕರ್ತರ ಅಭಿಪ್ರಾಯಗಳಿಗೆ ಗೌರವವಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ, ನನಗಾಗಿ ಹಗಲು ರಾತ್ರಿ ದುಡಿದಿದ್ದಾರೆ. ಈ ವೇಳೆ ನಾನು ನಿಮ್ಮ ಜೊತೆ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ಶುಕ್ರವಾರದ ತನಕ ಸಮಯವಿದೆ. ಇನ್ನೂ ಐದು ದಿನಗಳು ಸಮಯವಿದ್ದು ನಮ್ಮ ತೀರ್ಮಾನವನ್ನು ತಿಳಿಸುತ್ತೇವೆ. ಬಿಜೆಪಿ, ಜೆಡಿಎಸ್ ಅವರು ಅವರ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕು. ಅಲ್ಲಿಯವರೆಗೂ ಕಾಯೋಣ ಎಂದಿದ್ದಾರೆ.
ಬಿಜೆಪಿಯವರು ಒಂದು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಅವರೇ ತಿಳಿಸಬೇಕು. ಇದು ಆಯಾಯ ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು” ಎಂದು ಹೇಳಿದ್ದಾರೆ.