ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ ಮೊದಲ ಟೆಸ್ಟ್ ರೋಚಕತೆ ಪಡೆಯುತ್ತಿದೆ.
ಪಂದ್ಯದ ಎರಡನೇ ದಿನ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದರೆ, ಮೂರನೇ ದಿನ ಭಾರತ ತಿರುಗೇಟು ನೀಡಿದೆ. ಮೂರನೇ ದಿನದ ಎರಡನೇ ಸೆಷನ್ ನಲ್ಲಿ ಕಿವೀಸ್ ತಂಡವನ್ನು 402 ರನ್ ಗಳಿಗೆ ಆಲೌಟ್ ಮಾಡಿರುವ ಭಾರತ, ಕಿವೀಸ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸುತ್ತಿದೆ.
ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 231 ರನ್ ಗಳಿಸಿದೆ. ಈ ಮೂಲಕ ಇನ್ನಿಂಗ್ಸ್ ಹಿನ್ನಡೆಯನ್ನು ಭಾರತ ತಗ್ಗಿಸಿದಂತಾಗಿದೆ. ಇದುವರೆಗೆ ಮೂವರು ಬ್ಯಾಟ್ಸ್‌ಮನ್ ಗಳು ಅರ್ಧಶತಕ ಸಿಡಿಸಿ ಸೇಡು ತೀರಿಸಿಕೊಂಡಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 46 ರನ್ ಗಳಿಗೆ ಆಲೌಟ್ ಆಗಿದ್ದ ಭಾರತ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ರೋಹಿತ್ ಮತ್ತು ಯಶಸ್ವಿ ಮೊದಲ ವಿಕೆಟ್ ಗೆ 72 ರನ್ ಗಳ ಕಾಣಿಕೆ ನೀಡಿದರು. ಈ ವೇಳೆ ಯಶಸ್ವಿ 52 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರೆ, ನಾಯಕ ರೋಹಿತ್ ಶರ್ಮಾ 63 ಎಸೆತಗಳಲ್ಲಿ 52 ರನ್ ಗಳಿಸಿದರು.
ನಂತರ ವಿರಾಟ್ ಕೊಹ್ಲಿ ಮತ್ತು ಸರ್ಫರಾಜ್ ನಡುವೆ ಶತಕದ ಜೊತೆಯಾಟ ಬಂದಿತು. ಕೊಹ್ಲಿ 102 ಎಸೆತಗಳಲ್ಲಿ 70 ರನ್ ಗಳಿಸಿದರೆ, ಕೊನೆಯಲ್ಲಿ ಕ್ಯಾಚಿತ್ತು ಪೆವಿಲಿಯನ್ಗೆ ಸೇರಿಕೊಂಡರು. ಸರ್ಫರಾಜ್ 78 ಎಸೆತಗಳಲ್ಲಿ 70 ರನ್ ಗಳಿಸಿ ಅಜೇಯರಾಗಿದ್ದಾರೆ.
70 ರನ್ಗಳ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ, ಈ ಅರ್ಧಶತಕದ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂಬತ್ತು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ನಾಲ್ಕನೇ ದಿನ ಭಾರತೀಯ ಬ್ಯಾಟ್ಸಮನ್ ಗಳಿಂದ ಉತ್ತಮ ಪ್ರದರ್ಶನ ಬಂದರೆ, ಪಂದ್ಯ ರೋಚಕತೆ ಪಡೆಯಲಿದೆ.