ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಮರು ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದೆ. ಈ ಮಧ್ಯೆ ಎಲ್ಲ ಪಕ್ಷಗಳು ಭರ್ಜರಿ ತಂತ್ರ ಹೆಣೆಯುತ್ತಿವೆ. ಆದರೆ, ಚನ್ನಪಟ್ಟಣ ಕ್ಷೇತ್ರ ಮಾತ್ರ ರಾಜ್ಯದ ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯುತ್ತಿದೆ. ಏಕೆಂದರೆ ಅಲ್ಲಿ ಟಿಕೆಟ್ ಗಾಗಿ ಎನ್ ಡಿಎ ಮೈತ್ರಿಯ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆಯೇ ಟಿಕೆಟ್ ಗಾಗಿ ಫೈಟ್ ಶುರುವಾಗಿದೆ. ಇದರ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ.
ಹೀಗಾಗಿ ಚನ್ನಪಟ್ಟಣದತ್ತ ಎಲ್ಲರ ಚಿತ್ತ ನೆಟ್ಟಿದೆ. ಡಿ.ಕೆ. ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿಗೆ ಈ ಚುನಾವಣೆ ತುಂಬಾ ಪ್ರತಿಷ್ಠೆಯಿಂದ ಕೂಡಿದೆ. ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಗೂ ಅದೇ ರೀತಿಯ ವಾತಾವರಣ ಇದೆ. ಹೀಗಾಗಿ ಸಿ.ಪಿ.ಯೋಗೇಶ್ವರ್ ಅವರ ನಡೆಯ ಮೇಲೆ ಚುನಾವಣೆಯ ಫಲಿತಾಂಶ ಇಲ್ಲಿ ಬದಲಾಗುವ ಸಾಧ್ಯತೆ ಇದೆ.
ಇನ್ನು ಕೇವಲ 27 ದಿನದೊಳಗೆ ಚುನಾವಣೆ ನಡೆಯಲಿದೆ. 15 ದಿನಗಳಿಗೂ ಮುಂಚಿತವಾಗಿಯೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕು. ಹೀಗಾಗಿ, ಅಭ್ಯರ್ಥಿಗಳ ಆಯ್ಕೆ ಈಗ ಪಕ್ಷದಲ್ಲಿ ಸಾಕಷ್ಟು ಕಗ್ಗಂಟು ಸೃಷ್ಟಿಸಿದೆ. ಕಾಂಗ್ರೆಸ್ ತನ್ನ ನೆಲೆ ಭದ್ರಗೊಳಿಸಿಕೊಳ್ಳಲು ಹೆಣಗಾಡುತ್ತಿದೆ. ಹೀಗಾಗಿಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಈಗಾಗಲೇ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಆದರೆ, ಅಭ್ಯರ್ಥಿಯಾಗಿ ಅವರೇ ಕಣಕ್ಕೆ ಇಳಿಯುತ್ತಾರೋ? ಅಥವಾ ಅವರ ಸಹೋದರ ಡಿ.ಕೆ. ಸುರೇಶ್ ಅಖಾಡಕ್ಕೆ ಇಳಿಯುತ್ತಾರೋ ಎಂಬುವುದು ಮಾತ್ರ ಫೈನಲ್ ಆಗಿಲ್ಲ.
ಇನ್ನೊಂದೆಡೆ ಎನ್ ಡಿಎ ಮೈತ್ರಿಯಲ್ಲಿ ಸಿ.ಪಿ.ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಮಧ್ಯೆ ಟಿಕೆಟ್ ಗಾಗಿ ಫೈಟ್ ನಡೆಯುತ್ತಿದೆ. ಟಿಕೆಟ್‌ಗಾಗಿ ಇನ್ನಿಲ್ಲದ ಲಾಬಿ ನಡೆಸಿರುವ ಸಿಪಿವೈ, ಪಕ್ಷೇತರನಾಗಿಯಾದರೂ ಚುನಾವಣೆಗೆ ನಿಲ್ಲುವ ಸ್ಪಷ್ಟ ಸಂದೇಶ ನೀಡಿದ್ದಾರೆ. ಹೀಗಾಗಿ ಸಿಪಿವೈ ನಡೆ ಆಧರಿಸಿ, ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
ಜೆಡಿಎಸ್ ಕಾರ್ಯಕರ್ತರು ನಿಖಿಲ್ ಸ್ಪರ್ಧೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಯೋಗೇಶ್ವರ್ ಗೆ ಟಿಕೆಟ್ ನೀಡಬೇಕೆಂದು ಹಠ ಹಿಡಿದಿದ್ದಾರೆ. ಕಾಂಗ್ರೆಸ್ ನಲ್ಲಿ ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಅಖಾಡಕ್ಕೆ ಇಳಿಯಲಿ ಎಂಬ ಕೂಗು ಎದ್ದಿದೆ.
2023ರ ವಿಧಾನಸಭೆ ಚುನಾವಣೆಯ ಫಲಿತಾಂಶ ಗಮನಿಸುವುದಾದರೆ ಜೆಡಿಎಸ್-96,592, ಬಿಜೆಪಿ-80677, ಕಾಂಗ್ರೆಸ್- 15374 ಮತಗಳನ್ನು ಪಡೆದಿತ್ತು. ಹೀಗಾಗಿ ಈ ಬಾರಿ ಎನ್ ಡಿಎ ಮೈತ್ರಿಯ ಮಧ್ಯೆಯೇ ಟಿಕೆಟ್ ಗಾಗಿ ಫೈಟ್ ನಡೆದಿದೆ. ಸಿ.ಪಿ. ಯೋಗೇಶ್ವರ್ ನಿರ್ಧಾರದ ಮೇಲೆ ಫಲಿತಾಂಶ ನಿರ್ಧಾರವಾಗಲಿದ್ದು, ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.