ಹೈದರಾಬಾದ್: ಭಾರತವು ಬಾಂಗ್ಲಾ ವಿರುದ್ಧ ಮೂರನೇ ಪಂದ್ಯದಲ್ಲೂ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಹಲವು ದಾಖಲೆಗಳನ್ನು ಮಾಡಿದೆ.
3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಭಾರತ (Team India) ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡಿದೆ. ಭಾರತದ ಆಟಗಾರರು ಅಕ್ಷರಶಃ ಬಾಂಗ್ಲಾ ಆಟಗಾರರನ್ನು ಬೆಂಡೆತ್ತಿದರು. ಮೊದಲ ಓವರ್ ನಿಂದ ಭಾರತದ ಆರ್ಭಟ ಶುರುವಾಗಿತ್ತು.
ಸಂಜು ಸ್ಯಾಮ್ಸನ್ (Sanju Samson) ಭರ್ಜರಿ ಶತಕ ಸಿಡಿಸಿ ಫಾರ್ಮ್ ಗೆ ಮರಳಿ ವಿರೋಧಿಗಳ ಬಾಯಿ ಮುಚ್ಚಿಸಿದರು. ಈ ಮೂಲಕ ಟಿ20 ಕ್ರಿಕೆಟ್ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಬರೆದರು. ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಶತಕ ಸಿಡಿಸಿದ 2ನೇ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ಬರೆದರು.
20 ಓವರ್‌ಗಳಲ್ಲಿ 297 ರನ್ ಗಳಿಸಿದ ಭಾರತ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (T20I Cricket) ಗಳಿಸಿದ 2ನೇ ಗರಿಷ್ಠ ರನ್ ಗಳಿಸಿದ ಸಾಥನೆ ಮಾಡಿತು. 2023ರ ಏಷ್ಯನ್ ಗೇಮ್ಸ್ ನಲ್ಲಿ ನೇಪಾಳ ತಂಡವು ಮಂಗೋಲಿಯಾ ವಿರುದ್ಧ 314 ರನ್ ಗಳಿಸಿರುವುದು ಇಲ್ಲಿಯವರೆಗಿನ ದಾಖಲೆಯಾಗಿದೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ 10 ಓವರ್ ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ, ಅತಿವೇಗವಾಗಿ 100, 150, 200, 250 ರನ್ ಗಳಿಸಿದ ಮೊದಲ ತಂಡ ಎಂಬ ದಾಖಲೆ ಭಾರತದ ಪಾಲಿಗೆ ಬಂತು. ಇನ್ನಿಂಗ್ಸ್ ವೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ತಂಡವೂ ಭಾರತವಾಯಿತು.
ಬಾಂಗ್ಲಾದೇಶ ವಿರುದ್ಧ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡವು ಅತೀ ಹೆಚ್ಚು ಸ್ವೀಪ್ ಸರಣಿ ಮಾಡಿದ ಸಾಧನೆಯನ್ನೂ ಮಾಡಿತು. 34 ಸರಣಿಗಳ ಪೈಕಿ ಭಾರತ 10 ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿ ಭಾರತ ಅಗ್ರಸ್ಥಾನಲ್ಲಿದೆ. ಇನ್ನುಳಿದಂತೆ ಪಾಕಿಸ್ತಾನ (8), ಅಫ್ಘಾನಿಸ್ತಾನ (6), ಆಸ್ಟ್ರೇಲಿಯಾ (5), ಇಂಗ್ಲೆಂಡ್ (4) ಸರಣಿಗಳನ್ನು ಗೆದ್ದು ಕ್ರಮವಾಗಿ 2,3,4,5ನೇ ಸ್ಥಾನದಲ್ಲಿವೆ. ಹಬ್ಬದ ದಿನ ಭಾರತೀಯರ ಪಾಲಿಗೆ ಆಟಗಾರರು ಭರ್ಜರಿ ಪ್ರದರ್ಶನ ನೀಡಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.