ಭಾರತದ ಬದ್ಧ ವೈರಿ ಪಾಕಿಸ್ತಾನ ಈ ಬಾರಿ ಚಾಂಪಿಯನ್ಸ್ ಟ್ರೋಫಿ ನಡೆಸಲು ಉತ್ಸುಕವಾಗಿದೆ. ಆದರೆ, ಪರಮ ವೈರಿಯ ನಾಡಲ್ಲಿ ಪಂದ್ಯ ನಡೆಯುತ್ತಿರುವುದರಿಂದಾಗಿ ಭಾರತ ಭಾಗವಹಿಸುತ್ತದೆಯೇ? ಅಥವಾ ಇಲ್ಲವೇ? ಎಂಬ ಪ್ರಶ್ನೆ ಈಗ ಅಭಿಮಾನಿಗಳನ್ನು ಕಾಡುತ್ತಿದೆ.
ಕಳೆದ ಒಂದು ದಶಕದಿಂದ ರಾಜಕೀಯ ಕಾರಣಗಳಿಂದಾಗಿ ಎರಡೂ ಪಂದ್ಯಗಳು ದ್ವಿ ಪಕ್ಷೀಯ ಸರಣಿ ಆಡಿಲ್ಲ. ಭಾರತವಂತೂ ಪಾಕ್ ವಿರುದ್ಧ ಆಡುವುದೇ ಇಲ್ಲ ಎಂದು ಖಡಕ್ ಆಗಿ ಹೇಳಿ ಬಿಟ್ಟಿದೆ. ಭಯೋತ್ಪಾದನೆ ಜೀವಂತವಾಗಿರುವಾಗ ಕ್ರಿಕೆಟ್ ಆಡಲು ಸಾಧ್ಯವೇ ಇಲ್ಲ ಎಂದು ಖಡಕ್ ಆಗಿ ಗುಡುಗಿದೆ. ಆದರೆ, ಬೇರೆ ನಾಡಿನಲ್ಲಿ ಟೂರ್ನಿಗಳು ನಡೆದಾಗ ಭಾರತ ಹಾಗೂ ಪಾಕ್ ಮುಖಾಮುಖಿಯಾಗಿವೆ. ವಿಶ್ವಕಪ್ ವೇಳೆ ಕೂಡ ಭಾರತ ಹಾಗೂ ಪಾಕ್ ಮುಖಾಮುಖಿಯಾಗಿದ್ದವು.
1993ರಲ್ಲಿ ನಡೆದ ಹೀರೋ ಕಪ್ ಪಂದ್ಯಾವಳಿಗೆ ಪಾಕಿಸ್ತಾನವನ್ನು ಆಹ್ವಾನಿಸಿದರೂ ಅದು ಭಾಗವಹಿಸಿರಲಿಲ್ಲ. ಹೀಗಾಗಿ 6 ದೇಶಗಳ ನಡುವೆ ನಡೆಯಬೇಕಿದ್ದ ಟೂರ್ನಿ ಕೇವಲ 5 ದೇಶಗಳ ಮಧ್ಯೆ ನಡೆಯಿತು.
2007-08ರಲ್ಲಿ ಭಾರತ ಪಾಕಿಸ್ತಾನಕ್ಕೆ ಟೆಸ್ಟ್ ಸರಣಿ ಆಡಲು ಆ ನಾಡಿಗೆ ಕಾಲಿಟ್ಟಿದ್ದೇ ಭಾರತದ್ದು ಕೊನೆಯ ಪ್ರವಾಸವಾಗಿದೆ. ಇನ್ನೊಂದೆಡೆ ಪಾಕಿಸ್ತಾನ 2012-13ರಲ್ಲಿ ಒಂದು ಏಕದಿನ ಸರಣಿಯನ್ನು ಆಡಲು ಭಾರತಕ್ಕೆ ಬಂದಿದ್ದು ಕೊನೆಯಾಗಿತ್ತು. ಈಗ ಮುಂದಿನ ವರ್ಷದಿಂದ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಪಾಕಿಸ್ತಾನ ಈ ಟೂರ್ನಿ ಆಯೋಜಿಸುತ್ತಿದೆ. ಅಲ್ಲದೇ, ಪಾಕ್ ಕ್ರಿಕೆಟ್ ಮಂಡಳಿ ಲಾಹೋರ್ ನಲ್ಲೇ ಪೈನಲ್ ಆಡುವುದು ಎಂದು ತೀರ್ಮಾನಿಸಿದೆ. ಭಾರತದ ಪಂದ್ಯಗಳು ಬೇರೆಡೆ ನಡೆಯುವ ಕುರಿತು ಕೂಡ ಚರ್ಚೆಗಳಾಗುತ್ತಿವೆ. ಆದರೆ, ಭಾರತ ಫೈನಲ್ ಪ್ರವೇಶಿಸಿದರೆ ಹೇಗೆ ಎಂಬ ಚರ್ಚೆ ಕೂಡ ಈಗ ಶುರುವಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾತ್ರ ಭಾರತ ಖಂಡಿತವಾಗಿಯೂ ಪಾಕಿಸ್ತಾನದಲ್ಲಿ ಆಡುತ್ತದೆ ಎಂಬ ವಿಶ್ವಾಸ ಹೊಂದಿದೆ. ಆದರೆ, ಭಾರತ ಸರ್ಕಾರದ ನಿರ್ಧಾರದ ಮೇಲೆ ಎಲ್ಲವೂ ನಿಂತಿದ್ದು, ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.