ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಸೇರಿದಂತೆ ಇನ್ನಿತರ ಆರೋಪಿಗಳ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ಇಂದು ಎಸ್ ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಲು ಆರಂಭಿಸಿದರು. ದರ್ಶನ್ ಹಾಗೂ ಪವಿತ್ರಾ ಪರ ವಕೀಲರು ಪ್ರಕರಣದ ತನಿಖೆ ಬಗ್ಗೆ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾದರು. ಎಸ್ ಪಿಪಿ ಅವರ ವಾದ ಸರಣಿ ಸುದೀರ್ಘವಾಗಿ ನಡೆದಿದ್ದು, ಅಂತಿಮವಾಗಿ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಅ. 9ಕ್ಕೆ ಮುಂದೂಡಿತು.
ದರ್ಶನ್ ಪರ ಹಿರಿಯ ವಕೀಲರಾದ ಸಿವಿ ನಾಗೇಶ್, ಪವಿತ್ರಾ ಪರ ವಕೀಲರು ತನಿಖೆಯಲ್ಲಿ ಹಲವು ಲೋಪದೋಷಗಳಿವೆ ಎಂದಿದ್ದರು. ದರ್ಶನ್ ಪರ ವಕೀಲರು ಪೊಲೀಸರೇ ಸಾಕ್ಷ್ಯಗಳನ್ನು ಸೃಷ್ಟಿಮಾಡಿದ್ದಾರೆ, ಕತೆ ಹೆಣೆದಿದ್ದಾರೆ ಎಂದು ಟೀಕಿಸಿದ್ದರು.
ಇಂದು ವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ಆರೋಪಿಗಳ ಪರ ವಕೀಲರು ಎತ್ತಿರುವ ಪ್ರತಿ ಪ್ರಶ್ನೆಗೂ ಉತ್ತರಗಳಿವೆ ಎಂದು ವಾದ ಮಂಡಿಸಿದ್ದರು. ಸಿವಿ ನಾಗೇಶ್ ಅವರು ಪ್ರಶ್ನೆ ಮಾಡಿದ್ದ, ಎತ್ತಿ ತೋರಿಸಿದ್ದ ಲೋಪದೋಷಗಳಿಗೆ ಬಹುತೇಕ ಉತ್ತರಗಳನ್ನು ಸ್ಪಷ್ಟತೆ ನೀಡಿದರು. ನಂತರ ನಡೆದ ಘಟನೆಗಳು, ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆ ಎಲ್ಲವನ್ನೂ ಉಲ್ಲೇಖಿಸಿ, ‘ಇದು ದರ್ಶನ್ ರಕ್ತಚರಿತ್ರೆ’ ಎಂದು ಟೀಕಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅರೆಸ್ಟ್ ಆಗಿ ನಾಲ್ಕು ತಿಂಗಳು ಕಳೆದಿವೆ. ಪ್ರಕರಣದ ನಾಲ್ವರಿಗೆ ಜಾಮೀನು ಕೂಡ ಸಿಕ್ಕಿದೆ. ದರ್ಶನ್ ಪರ ಸಿ.ವಿ. ನಾಗೇಶ್ ವಾದ ಮಂಡಿಸುತ್ತಿದ್ದಾರೆ.