ಮಂಡ್ಯ: ನಾಗಮಂಗಲದಲ್ಲಿ ಗಣೇಶ ವಿಷರ್ಜನೆ ಸಂದರ್ಭದಲ್ಲಿ ನಡೆದ ಕೋಮುಗಲಭೆಗೆ ಇಡೀ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈಗ ಗಲಭೆಗೆ ಸಂಬಂಧಿಸಿದಂತೆ ದೂರು ನೀಡಿದ್ದ ಅಧಿಕಾರಿಯನ್ನೇ ಅಮಾನತು ಮಾಡಲಾಗಿದೆ.
ನಾಗಮಂಗಲ ಕೋಮುಗಲಭೆ ಬಳಿಕ ದೂರು ನೀಡಿದ್ದ ನಾಗಮಂಗಲ ಟೌನ್ ಠಾಣೆ ಪಿಎಸ್ ಐ ಬಿ.ಜೆ.ರವಿ ಅವರನ್ನು ಅಮಾನತು ಮಾಡಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಆದೇಶ ಹೊರಡಿಸಿದ್ದಾರೆ. ದೂರಿನಲ್ಲಿ ಗಣೇಶ ವಿಸರ್ಜನೆ ಮಾಡುತ್ತಿದ್ದವರ ಪ್ರಚೋದನೆಯಿಂದ ಗಲಭೆ ಸೃಷ್ಷಿಯಾಗಿದೆ ಎಂದು ಉಲ್ಲೇಖವಾಗಿತ್ತು. ಹೀಗಾಗಿ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪಿಎಸ್ ಐ ರವಿ ಅವರನ್ನು ಅಮಾನತು ಮಾಡಲಾಗಿದೆ. ಪಿಎಸ್ ಐ ಬಿಜೆ ರವಿ ಜೊತೆಗೆ ಪೊಲೀಸ್ ಪೇದೆ ರಮೇಶ್ ಅವರನ್ನೂ ಅಮಾನತು ಮಾಡಲಾಗಿದೆ.
ಗಣೇಶ ವಿಷರ್ಜನೆ ಸಂದರ್ಭದಲ್ಲಿ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂಲಕ ಇಲ್ಲಿಯವರೆಗೆ ಒಟ್ಟು ನಾಲ್ವರನ್ನು ಅಮಾನತು ಮಾಡಲಾಗಿದೆ. ಹಿಂದೆ ಡಿವೈಎಸ್ಪಿ ಸುಮಿತ್, ಪಿಐ ಅಶೋಕ್ ಅಮಾನತು ಆಗಿದ್ದರು. ಈಗ ಮತ್ತಿಬ್ಬರನ್ನು ಅಮಾನತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ದರ್ಗಾ ಬಳಿ ನಡೆದ ಗಲಭೆಯಲ್ಲಿ 20ಕ್ಕೂ ಅಧಿಕ ಅಂಗಡಿಗಳನ್ನು ಧ್ವಂಸ ಮಾಡಲಾಗಿತ್ತು. ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಿಂದೂಗಳ ಗುಂಪು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಗಣಪತಿ ವಿಸರ್ಜನೆಗೆ ತೆರಳುತ್ತಿದ್ದಂತೆ ಮುಸ್ಲಿಂರ ಗುಂಪು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದರು. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ತೆರಳಿತ್ತು. ಪೊಲೀಸರು ಲಾಠಿಚಾರ್ಜ್ ನಡೆಸಿ ಹಲವರನ್ನು ಬಂಧಿಸಿದ್ದರು.
ಆದರೆ, ಗಲಾಟೆಯ ಹಿಂದೆ ಪೊಲೀಸರ ಲೋಪ ಎದ್ದು ಕಾಣುತ್ತಿದೆ. ಗಣೇಶ ವಿಸರ್ಜನೆ ಮೆರವಣಿಗೆಗೆ ಕಾವಲಿಗೆ 24 ಜನ ಡಿಎಆರ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಸಿಬ್ಬಂದಿಗೆ ಊಟ ಕೊಡಿಸಲು ನಾಗಮಂಗಲ ಠಾಣೆ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಹಿಂದೇಟು ಹಾಕಿದ್ದರು. ಬದಲಿಗೆ 24 ಮಂದಿ ಡಿಎಆರ್ ಸಿಬ್ಬಂದಿಯನ್ನು ಊಟಕ್ಕೆ ಬೇರೆ ಕಡೆ ಕಳುಹಿಸಿದ್ದರು. ರಿಸರ್ವ್ ಪೊಲೀಸ್ ಸಿಬ್ಬಂದಿ ವಾಹನ ಹೊರಟ ಅರ್ಧ ಗಂಟೆ ನಂತರ ಈ ಗಲಭೆ ನಡೆದಿತ್ತು. ಹೀಗಾಗಿ ಸ್ಥಳದಲ್ಲಿ 7 ಜನ ಸಿಬ್ಬಂದಿ ಮಾತ್ರ ಇದ್ದರು. ಪಿಎಸ್ಐ ರವಿ ಸೇರಿದಂತೆ ಹಲವು ಸಿಬ್ಬಂದಿ ಮೇಲೆಯೇ ಕಿಡಿಗೇಡಿಗಳು ದಾಳಿ ಮಾಡಿದ್ದರು. ರಿಸರ್ವ್ ಸಿಬ್ಬಂದಿ ಮರಳಿ ಬರುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು. ಹೀಗಾಗಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.