ಕಲಬುರಗಿ: ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 93 ವರ್ಷದ ಅಜ್ಜಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ನಗರದಲ್ಲಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 93 ವರ್ಷದ ಅಜ್ಜಿ ನಾಗಮ್ಮ ಎಂಬುವವರಿಗೆ ಕಾರಾಗೃಹ ಇಲಾಖೆ ಪೆರೋಲ್ ನೀಡಿದೆ.
ರಾಜ್ಯದ ಉಪಲೋಕಾಯುಕ್ತ ಬಿ.ವೀರಪ್ಪ, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಜ್ಜಿ ನಾಗಮ್ಮ ಅವರ ಪರಿಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ್ದು. ಈ ಹಿನ್ನೆಲೆಯಲ್ಲಿ ಪೆರೋಲ್ ನೀಡುವ ಕುರಿತು ಸಲಹೆ ನೀಡಿದ್ದರು. ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಅವರು ಅಜ್ಜಿಯ ಅನಾರೋಗ್ಯ ಮತ್ತು ಇಳಿವಯಸ್ಸಿನಲ್ಲಿ ಕಾಡುತ್ತಿರುವ ವಯೋಸಹಜ ಕಾಯಿಲೆಗಳ ಕುರಿತು ಇಲಾಖೆಯ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದರು.
ಹೀಗಾಗಿ ಅಜ್ಜಿಗೆ ಪೆರೋಲ್ ನೀಡಿ ಬಿಡುಗಡೆ ಮಾಡಲಾಗಿದೆ. 26 ವರ್ಷಗಳ ಹಿಂದೆ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಜ್ಜಿಗೆ ಮೂರು ವರ್ಷಗಳ ಶಿಕ್ಷೆ ಪ್ರಕಟವಾಗಿತ್ತು. ಕಳೆದ ಒಂದು ವರ್ಷದಿಂದ ಅಜ್ಜಿ ಜೈಲಿನಲ್ಲಿದ್ದರು. ಈಗ ಮಾನವೀಯತೆಯ ದೃಷ್ಟಿಯಿಂದ ಪೆರೋಲ್ ನೀಡಲಾಗಿದೆ.