ವಾಷಿಂಗ್ಟನ್/ಟೆಹ್ರಾನ್ : ನಿನ್ನೆ ರಾತ್ರಿ ಇಡೀ ಜಗತ್ತು ಅಕ್ಷರಶಃ ಉಸಿರು ಬಿಗಿಹಿಡಿದು ಕುಳಿತಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಅಂತಿಮ ಮತ್ತು ಭೀಕರ ದಾಳಿ ನಡೆಸಲು ನೀಡಿದ್ದ ಗಡುವು ಮುಗಿಯಲು ಇನ್ನು ಕೇವಲ 90 ನಿಮಿಷಗಳು ಮಾತ್ರ ಬಾಕಿ ಇದ್ದವು. ಇಡೀ ಇರಾನ್ ನಾಗರಿಕತೆಯನ್ನೇ ಅಳಿಸಿಹಾಕುವ ಎಚ್ಚರಿಕೆ ನೀಡಿದ್ದ ಟ್ರಂಪ್, ಶ್ವೇತಭವನದಲ್ಲಿ ದಾಳಿಯ ಅಂತಿಮ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, 6:32ರ ಸುಮಾರಿಗೆ ಅವರ ಒಂದು ಪೋಸ್ಟ್ ಇಡೀ ಯುದ್ಧದ ದಿಕ್ಕನ್ನೇ ಬದಲಿಸಿತು.
ಟ್ರಂಪ್ ಅವರ ಎಚ್ಚರಿಕೆಯ ಬೆನ್ನಲ್ಲೇ ಇರಾನ್‌ನಲ್ಲಿ ಭೀತಿ ಮತ್ತು ದೇಶಭಕ್ತಿಯ ಅಲೆ ಎರಡೂ ಎದ್ದಿತ್ತು. ಅಮೆರಿಕದ ಬಾಂಬರ್‌ಗಳು ತಮ್ಮ ವಿದ್ಯುತ್ ಸ್ಥಾವರಗಳು ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಮಾಡಬಹುದು ಎಂಬ ಸುಳಿವು ಸಿಗುತ್ತಿದ್ದಂತೆಯೇ ಸಾವಿರಾರು ಇರಾನಿ ಯುವಕರು, ಮಹಿಳೆಯರು ಮತ್ತು ಕುಟುಂಬಗಳು ಪ್ರಮುಖ ತೈಲ ಮತ್ತು ವಿದ್ಯುತ್ ಸ್ಥಾವರಗಳ ಸುತ್ತ ‘ಮಾನವ ಸರಪಳಿ’ ನಿರ್ಮಿಸಿದ್ದರು. ತಮ್ಮ ದೇಹವನ್ನೇ ಗುರಾಣಿಯನ್ನಾಗಿಸಿಕೊಂಡು ದೇಶದ ಆಸ್ತಿಯನ್ನು ಉಳಿಸಿಕೊಳ್ಳಲು ಜನ ರಸ್ತೆಗೆ ಇಳಿದಿದ್ದರು. ಇತ್ತ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಗಡುವಿಗೆ ಮುನ್ನವೇ ಕೆಲವು ಸೇತುವೆ ಮತ್ತು ತೈಲ ಕೇಂದ್ರಗಳ ಮೇಲೆ ದಾಳಿಯನ್ನು ತೀವ್ರಗೊಳಿಸಿದ್ದವು. ಆದರೆ ಕೊನೇ ಕ್ಷಣದಲ್ಲಿ ಎಲ್ಲವೂ ಬದಲಾಯಿತು.
ಪಾಕಿಸ್ತಾನದ ರಾಜತಾಂತ್ರಿಕ ಚದುರಂಗದಾಟ
ಯುದ್ಧ ನಿಲ್ಲಿಸುವಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರ ಮಧ್ಯಸ್ಥಿಕೆ ಪ್ರಮುಖ ಪಾತ್ರ ವಹಿಸಿತು. ಷರೀಫ್ ಅವರು ಟ್ರಂಪ್ ಮತ್ತು ಇರಾನ್ ನಾಯಕರನ್ನು ಏಕಕಾಲಕ್ಕೆ ಟ್ಯಾಗ್ ಮಾಡಿ, “ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿ ಮತ್ತು ದಾಳಿಯನ್ನು ಎರಡು ವಾರ ಮುಂದೂಡಿ” ಎಂಬ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. ಈ ಪ್ರಸ್ತಾವನೆಯು ಅಮೆರಿಕಕ್ಕೆ ಗೌರವಯುತವಾಗಿ ಹಿಂದೆ ಸರಿಯಲು ಮತ್ತು ಇರಾನ್‌ಗೆ ಶರಣಾಗತಿಯಿಲ್ಲದೆ ಒಪ್ಪಂದ ಮಾಡಿಕೊಳ್ಳಲು ದಾರಿಯಾಯಿತು.
ಶ್ವೇತಭವನದೊಳಗಿನ ಬಿರುಸಿನ ಚರ್ಚೆ
ಟ್ರಂಪ್ ಅವರ ಆಪ್ತ ವಲಯದಲ್ಲಿ ಎರಡು ಭಿನ್ನ ಅಭಿಪ್ರಾಯಗಳಿದ್ದವು. ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಸೌದಿ ಅರೇಬಿಯಾದ ನಾಯಕರು ಇರಾನ್ ಮೇಲೆ ಪೂರ್ಣ ಪ್ರಮಾಣದ ದಾಳಿಗೆ ಒತ್ತಾಯಿಸಿದ್ದರು. ಆದರೆ, ಟ್ರಂಪ್ ಅವರ ಸಲಹೆಗಾರರಾದ ಜೆ.ಡಿ. ವ್ಯಾನ್ಸ್ ಮತ್ತು ವಿಟ್ಕಾಫ್ ಅವರು ಮಾತುಕತೆಗೆ ಒತ್ತು ನೀಡುವಂತೆ ಸೂಚಿಸಿದರು. ಅಂತಿಮವಾಗಿ ಇರಾನ್ ಕಳುಹಿಸಿದ 10 ಅಂಶಗಳ ಪ್ರಸ್ತಾವನೆಯಲ್ಲಿ ‘ಹೊರ್ಮುಜ್ ಜಲಸಂಧಿ’ಯ ಮುಕ್ತ ಸಂಚಾರದ ಭರವಸೆ ಸಿಕ್ಕಿದ್ದರಿಂದ ಟ್ರಂಪ್ ಕದನ ವಿರಾಮಕ್ಕೆ ಅಂಕಿತ ಹಾಕಿದರು.
ಮಾರುಕಟ್ಟೆಯಲ್ಲಿ ಹರ್ಷ, ನಾಗರಿಕರ ನಿಟ್ಟುಸಿರು
ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ.9ರಷ್ಟು ಕುಸಿತ ಕಂಡಿತು. ಅಮೆರಿಕದ ಷೇರು ಮಾರುಕಟ್ಟೆಗಳು ಭಾರೀ ಏರಿಕೆ ದಾಖಲಿಸಿದವು. ಇತ್ತ ಇರಾನ್‌ನ ವಿದ್ಯುತ್ ಸ್ಥಾವರಗಳ ಮುಂದೆ ನಿಂತಿದ್ದ ಜನರು ತಮ್ಮ ಮೊಬೈಲ್‌ಗಳಲ್ಲಿ ಸುದ್ದಿ ನೋಡಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಸದ್ಯಕ್ಕೆ ಏಪ್ರಿಲ್ 10 ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಮಾತುಕತೆಯ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. ವಿನಾಶದ ಅಂಚಿನಿಂದ ಜಗತ್ತು ಸದ್ಯಕ್ಕೆ ಪಾರಾದಂತಾಗಿದೆ.
ಇದನ್ನೂ ಓದಿ : ದಾಳಿ ನಿಲ್ಲಿಸಲು ಇರಾನ್ ಸೇನೆಗೆ ಮೊಜ್ತಬಾ ಆದೇಶ : “ಇದು ಯುದ್ಧದ ಅಂತ್ಯವಲ್ಲ” ಎಂದು ಅಮೆರಿಕಕ್ಕೆ ಎಚ್ಚರಿಕೆ!



















