ಪೇಶಾವರ: ಪಾಕಿಸ್ತಾನದ ಪೇಶಾವರದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಸೇನೆಯು ಆಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 9 ಮಕ್ಕಳು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯು ಎರಡು ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಾಲಿಬಾನ್ ಸರ್ಕಾರ ಆರೋಪಿಸಿದೆ.
ಮಧ್ಯರಾತ್ರಿಯ ಭೀಕರ ದಾಳಿ
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರ ಪ್ರಕಾರ, ಪಾಕಿಸ್ತಾನದ ಪಡೆಗಳು ಮಧ್ಯರಾತ್ರಿ ಖೋಸ್ಟ್ ಪ್ರಾಂತ್ಯದ ಗುರ್ಬುಜ್ ಜಿಲ್ಲೆಯಲ್ಲಿರುವ ವಾಲಿಯತ್ ಖಾನ್ ಎಂಬುವವರ ಮನೆಯನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿವೆ. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ 5 ಗಂಡು ಮಕ್ಕಳು, 4 ಹೆಣ್ಣು ಮಕ್ಕಳು ಮತ್ತು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಇದಲ್ಲದೆ, ಕುನಾರ್ ಮತ್ತು ಪಕ್ಟಿಕಾ ಪ್ರಾಂತ್ಯಗಳ ಮೇಲೂ ವೈಮಾನಿಕ ದಾಳಿ ನಡೆದಿದ್ದು, ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ.
ಪೆಶಾವರ ದಾಳಿಗೆ ಪ್ರತೀಕಾರವೇ?
ಈ ವೈಮಾನಿಕ ದಾಳಿಯ ಹಿಂದಿನ ದಿನವಷ್ಟೇ ಪಾಕಿಸ್ತಾನದ ಪೇಶಾವರದಲ್ಲಿರುವ ಅರೆಸೇನಾ ಪಡೆಯ ಪ್ರಧಾನ ಕಚೇರಿಯ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP) ಸಂಘಟನೆಯ ಭಾಗವಾದ ‘ಜಮಾತ್-ಉಲ್-ಅಹ್ರಾರ್’ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಪಾಕಿಸ್ತಾನವು ಈ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಆಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಉಲ್ಬಣಗೊಳ್ಳುತ್ತಿರುವ ಸಂಘರ್ಷ
ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಗಡಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಘರ್ಷ ಹೆಚ್ಚಾಗುತ್ತಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು, ಶಾಂತಿ ಮಾತುಕತೆ ವಿಫಲವಾದರೆ ಆಫ್ಘಾನಿಸ್ತಾನದ ವಿರುದ್ಧ “ಬಹಿರಂಗ ಯುದ್ಧ” ಘೋಷಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದೀಗ ಮಕ್ಕಳ ಸಾವಿನೊಂದಿಗೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಕದನ ವಿರಾಮ ಒಪ್ಪಂದ ಕೇವಲ ಕಾಗದಕ್ಕೆ ಸೀಮಿತವಾಗಿದೆ.
ಇದನ್ನೂ ಓದಿ: ದೆಹಲಿ ಸ್ಫೋಟದ ಭೀತಿ : ಭಾರತ ಪ್ರವಾಸವನ್ನು ಮತ್ತೆ ರದ್ದುಗೊಳಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು



















