ಬೆಂಗಳೂರು: ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ಜಾರಿಗೆ ಕಳೆದ ಜನವರಿಯಲ್ಲಿ ಅನುಮೋದನೆ ನೀಡಿದೆ. ಆದರೆ, ಹಲವು ಕಾರಣಗಳಿಂದಾಗಿ ಇದುವರೆಗೆ 8ನೇ ವೇತನ ಆಯೋಗವನ್ನು (8th Pay Commission) ರಚನೆ ಮಾಡಿಲ್ಲ. ಯಾವಾಗ ರಚನೆಯಾಗುತ್ತದೆಯೋ ಎಂದು ಕೇಂದ್ರ ಸರ್ಕಾರಿ ನೌಕರರು, ನಿವೃತ್ತ ನೌಕರರು ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ, 8ನೇ ವೇತನ ಆಯೋಗದ ರಚನೆ ಕುರಿತು ಕೇಂದ್ರ ಸರ್ಕಾರವು ಮಹತ್ವದ ಅಪ್ ಡೇಟ್ ನೀಡಿದೆ.
ವೇತನ ಆಯೋಗದ ಜಾರಿ ಕುರಿತು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರ ನೀಡಿದ್ದಾರೆ. “ನಿಗದಿತ ಅವಧಿಯಲ್ಲಿಯೇ ನೂತನ ಆಯೋಗವನ್ನು ರಚನೆ ಮಾಡಲಾಗುತ್ತದೆ. ಈಗಾಗಲೇ ಆಯೋಗದ ಜಾರಿ ಕುರಿತು ಸಲಹೆ-ಸೂಚನೆಗಳನ್ನು ಸ್ವೀಕರಿಸಲಾಗಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರವು ಆಯೋಗದ ರಚನೆ ಕುರಿತು ಅಧಿಸೂಚನೆ ಹೊರಡಿಸುತ್ತದೆ” ಎಂದು ಮಾಹಿತಿ ನೀಡಿದ್ದಾರೆ.
8ನೇ ವೇತನ ಆಯೋಗದ ಪ್ರಸ್ತಾವನೆ ಸಲ್ಲಿಕೆಯ ಅನುಮೋದನೆಯ ಪ್ರಕಾರ ಅನುಷ್ಠಾನವು 2026-27ನೇ ಹಣಕಾಸು ವರ್ಷದಲ್ಲಿ ಆಗುವ ಸಾಧ್ಯತೆಯಿದೆ. ಅಂದಾಜು ಶೇ. 30 ರಿಂದ 34ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ವರದಿಗಳು ಆಗಿವೆ. ಈಗಾಗಲೇ 8ನೇ ವೇತನ ಆಯೋಗ ಘೋಷಣೆಯಾದರೂ ಹಣದುಬ್ಬರ ಮತ್ತು ಇನ್ನೂ ಇತರೆ ಕಾರಣಗಳಿಂದ 8ನೇ ವೇತನ ಆಯೋಗದಲ್ಲಿ ವಿಳಂಬವಾಗುತ್ತಿದೆ.
ರಕ್ಷಣಾ ಸಿಬ್ಬಂದಿ ಸೇರಿ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗದ ಫಲಾನುಭವಿಗಳಾಗಿದ್ದಾರೆ. ಇದರೊಂದಿಗೆ, ರಕ್ಷಣಾ ನಿವೃತ್ತರು ಸೇರಿದಂತೆ ಸುಮಾರು 65 ಲಕ್ಷ ಕೇಂದ್ರ ಸರ್ಕಾರಿ ಪಿಂಚಣಿದಾರರು ಇದರ ಪ್ರಯೋಜನ ಪಡೆಯುವ ನಿರೀಕ್ಷೆಯಂತೂ ಇದೆ. ಸರ್ಕಾರಿ ನೌಕರರ ವೇತನ ರಚನೆಯಲ್ಲಿ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಕೇಂದ್ರ ಸರ್ಕಾರವು ಸಾಮಾನ್ಯವಾಗಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುತ್ತದೆ. ಹಣದುಬ್ಬರ, ಆರ್ಥಿಕತೆಯ ಸ್ಥಿತಿ, ಆದಾಯದ ಅಸಮಾನತೆಗಳು ಮತ್ತು ಸಂಬಂಧಿತ ಸೂಚಕಗಳು ಸೇರಿದಂತೆ ಅಂಶಗಳನ್ನು ಆಯೋಗವು ಪರಿಗಣಿಸುತ್ತದೆ.