ಹುಬ್ಬಳ್ಳಿ : ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 79ನೆಯ ವರ್ಧಂತಿ ಮಹೋತ್ಸವವು ತೆಲಂಗಾಣ ರಾಜ್ಯದ ಸದಾಶಿವಪೇಟ ಮಹಾನಗರದ ಚೌಕಿಮಠದಲ್ಲಿ ಆ.8 ರಂದು ಸಂಜೆ 5 ಗಂಟೆಗೆ ಜರುಗಲಿದೆ.
ಹುಬ್ಬಳ್ಳಿ ನವನಗರ ಕಾಶಿಶಾಖಾಮಠದ ಶ್ರೀರಾಜಶೇಖರ ಶಿವಾಚಾರ್ಯರು, ಬೀದರ ಜಿಲ್ಲೆ ವಿಮಲಖೇಡ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯರು, ಮಹಾರಾಷ್ಟ್ರ ಬಾರ್ಸಿ ಹಿರೇಮಠದ ಶ್ರೀಗುರುಸಿದ್ಧ ಮಣಿಕಂಠ ಶಿವಾಚಾರ್ಯರು, ತೆಲಂಗಾಣ ಬಿಚಗುಂದ ಸಂಸ್ಥಾನಮಠದ ಶ್ರೀಸೋಮಲಿಂಗ ಶಿವಾಚಾರ್ಯರೂ ಸೇರಿದಂತೆ ವಿವಿಧ ರಾಜ್ಯಗಳ ಮಠಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರುಗಳಿಗೆ ಗುರುವಂದನೆ ಸಲ್ಲಿಸಲಿದ್ದಾರೆ. ಈ ವರ್ಧಂತಿ ಮಹೋತ್ಸವದ ಅಂಗವಾಗಿ ಆ.4ರಿಂದಲೇ ತೆಲಂಗಾಣ ರಾಜ್ಯದ ಸದಾಶಿವಪೇಟ ಮಹಾನಗರದ ಚೌಕಿಮಠದಲ್ಲಿ ನಡೆದಿರುವ ಧರ್ಮ ಚಿಂತನ ಸಮಾವೇಶವು ಆ.8 ರಂದು ಸಂಪನ್ನಗೊಳ್ಳಲಿದೆ.
ಬಹುಭಾಷಾ ವಿದ್ವಾಂಸರು : ಕಾಶಿ ಜ್ಞಾನ ಪೀಠದ 86ನೆಯ ಪೀಠಾಚಾರ್ಯರಾಗಿರುವ ಮತ್ತು ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ ಮುಂತಾದ ಬಹುಭಾಷಾ ವಿದ್ವಾಂಸರಾಗಿರುವ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವಿಶೇಷವಾಗಿ ವೀರಶೈವ ಸಂಸ್ಕೃತ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದು, ಜ್ಞಾನದ ಮೇರು ಪರ್ವತವೇ ಆಗಿದ್ದಾರೆ. ಇವರು ಮಂಡಿಸಿದ ಎರಡೂ ಪಿ.ಎಚ್‌ಡಿ. ಮಹಾಪ್ರಬಂಧಗಳ ಕೃತಿಗಳು ಪ್ರಸ್ತುತ ಕಾಶಿ ಹಿಂದೂ ವಿಶ್ವವಿದ್ಯಾಲಯ ಮತ್ತು ಸಂಪೂರ್ಣಾನ0ದ ಸಂಸ್ಕೃತ ವಿಶ್ವವಿದ್ಯಾಲಯದ ವಿಭಿನ್ನ ಪದವಿಗಳಿಗೆ ಪಠ್ಯಪುಸ್ತಕಗಳಾಗಿವೆ. ವೀರಶೈವ ತತ್ವಶಾಸ್ತçದಲ್ಲಿ ಮನುಕುಲದ ವಿಕಾಸದ ಆಶಯಗಳಿಗೆ ತೆರೆದುಕೊಂಡು ಗಮನಸೆಳೆದಿರುವ ‘ಶ್ರೀಸಿದ್ಧಾಂತ ಶಿಖಾಮಣಿ’ ಕೃತಿಯ ವ್ಯಾಪಕ ಪ್ರಸಾರಕ್ಕೆ ಆದ್ಯತೆ ನೀಡಿದ್ದಾರೆ. ದೇಶ-ವಿದೇಶದ ಒಟ್ಟು 20 ಭಾಷೆಗಳಿಗೆ ‘ಶ್ರೀಸಿದ್ಧಾಂತ ಶಿಖಾಮಣಿ’ ಕೃತಿಯನ್ನು ಭಾಷಾಂತರ ಮಾಡಿಸಿ ಪ್ರಕಟಿಸಿದ ಶ್ರೇಯಸ್ಸು ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರಿಗೆ ಸಲ್ಲುತ್ತದೆ. ಕಾಶಿ ಪೀಠದ ಸಮಾರಂಭದಲ್ಲಿ ಭಾಷಾಂತರಗೊಂಡ ಎಲ್ಲಾ ಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದು ಕಾಶಿ ಪೀಠದ ಚಾರಿತ್ರಿಕ ದಾಖಲೆಯಾಗಿದೆ. ವೀರಶೈವ ವಾಙ್ಮಯ ವಿಹಾರದಲ್ಲಿ ನಡೆಸುವ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಿ ಎಲ್ಲಾ ಸಂಶೋಧನಾ ಸಾಹಿತ್ಯ ಕೃತಿಗಳನ್ನು ಕಾಶಿ ಪೀಠದಿಂದಲೇ ಪ್ರಕಟಿಸಿದ್ದಾರೆ.
ಉತ್ತರಪ್ರದೇಶದ ವಾರಾಣಾಸಿ ನಗರದ ತಮ್ಮ ಪೀಠದ ಕಟ್ಟಡವನ್ನು ನವೀಕರಣಗೊಳಿಸಿದ್ದು, 5 ಸಾವಿರ ಭಕ್ತರಿಗೆ ವಸತಿ ಮತ್ತು ದಾಸೋಹದ ವ್ಯವಸ್ಥೆ ಕಲ್ಪಿಸಿದ್ದಾರೆ. ಪ್ರಯಾಗರಾಜ್‌ನಲ್ಲಿರುವ ಜಂಗಮವಾಡಿ ಮಠವನ್ನು ನವೀಕರಿಸಲಾಗಿದ್ದು, ಪ್ರಸ್ತುತ ದಕ್ಷಿಣ ಭಾರತದ ರಾಮೇಶ್ವರದ ಒಂದು ಎಕರೆ ಪ್ರದೇಶದಲ್ಲಿ ಭಕ್ತರ ಯಾತ್ರಿನಿವಾಸ ನಿರ್ಮಿಸಲಾಗುತ್ತಿದೆ. ಬೆಂಗಳೂರು, ಬಾಗಲಕೋಟ, ವಿಜಯಪೂರ, ಹಾವೇರಿ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ದೇಶದ ಅನೇಕ ರಾಜ್ಯಗಳಲ್ಲಿ ಕಾಶಿ ಪೀಠದ ಶಾಖಾಮಠಗಳ ಪರಿಸರದಲ್ಲಿ ಸಂಸ್ಕೃತ ವೇದಪಾಠಶಾಲೆಗಳ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಕೇವಲ ಭಾರತವಷ್ಟೇ ಅಲ್ಲದೇ ಪಕ್ಕದ ಬಾಂಗ್ಲಾ ಮತ್ತು ರಷ್ಯಾ ದೇಶಶಗಳಲ್ಲಿಯೂ ಇವರ ಭಕ್ತರಿದ್ದು, ಅವರು ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದು ಶಿವಯೋಗ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಸಂಚಾಲಕ ಶಿವಾನಂದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















