ಭುವನೇಶ್ವರ : ಪ್ರೀತಿಯೆಂದರೆ ಕೇವಲ ಪದಗಳಲ್ಲ, ಅದೊಂದು ಅಚಲವಾದ ನಂಬಿಕೆ ಮತ್ತು ಹೋರಾಟ ಎಂಬುದನ್ನು ಒಡಿಶಾದ 75 ವರ್ಷದ ವೃದ್ಧ ಬಾಬು ಲೋಹರ್ ಇಡೀ ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಬಿಹಾರದ ‘ಮೌಂಟೇನ್ ಮ್ಯಾನ್’ ದಶರಥ್ ಮಾಂಜಿ ಬೆಟ್ಟವನ್ನೇ ಕೊರೆದು ದಾರಿ ಮಾಡಿದ್ದನ್ನು ನಾವು ಕೇಳಿದ್ದೇವೆ. ಈಗ ಒಡಿಶಾದ ಈ ವೃದ್ಧ ತನ್ನ ಪಾರ್ಶ್ವವಾಯು ಪೀಡಿತ ಪತ್ನಿಯ ಚಿಕಿತ್ಸೆಗಾಗಿ ಸತತ 300 ಕಿಲೋಮೀಟರ್ ರಿಕ್ಷಾ ತುಳಿಯುವ ಮೂಲಕ ಆಧುನಿಕ ಕಾಲದ ಪ್ರೇಮಕಾವ್ಯವೊಂದನ್ನು ಬರೆದಿದ್ದಾರೆ.

ಬಡತನದ ನಡುವೆ ಮೊಳಕೆಯೊಡೆದ ಛಲದ ಹಾದಿ
ಸಂಬಲ್ಪುರದ ಮೋದಿಪಾಡಾ ನಿವಾಸಿ ಬಾಬು ಲೋಹರ್ ಅವರ ಪತ್ನಿ ಜ್ಯೋತಿ (70) ಅವರಿಗೆ ಇತ್ತೀಚೆಗೆ ಪಾರ್ಶ್ವವಾಯು ಉಂಟಾಗಿತ್ತು. ಸ್ಥಳೀಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಕೈಯಲ್ಲಿ ಬಿಡಿಗಾಸಿಲ್ಲದ, ಖಾಸಗಿ ಆಂಬ್ಯುಲೆನ್ಸ್ ಮಾಡಲು ಚೈತನ್ಯವಿಲ್ಲದ ಬಾಬು ಲೋಹರ್ ದೃತಿಗೆಡಲಿಲ್ಲ. ತನ್ನ ಹಳೆಯ ಸೈಕಲ್ ರಿಕ್ಷಾವನ್ನೇ ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿದರು. ಹಳೆಯ ಕುಶನ್‌ಗಳನ್ನು ಹಾಸಿ, ಪತ್ನಿಗೆ ಕೊಂಚ ಆರಾಮವೆನಿಸುವಂತೆ ಮಾಡಿ ಸಂಬಲ್ಪುರದಿಂದ ಕಟಕ್‌ನತ್ತ ಪ್ರಯಾಣ ಬೆಳೆಸಿದರು.
9 ದಿನಗಳ ಅಗ್ನಿಪರೀಕ್ಷೆ
ವಯಸ್ಸಿನ ಭಾರವಿದ್ದರೂ ಪತ್ನಿಯ ಜೀವ ಉಳಿಸಬೇಕೆಂಬ ಹಂಬಲ ಬಾಬು ಅವರಲ್ಲಿ ಚೈತನ್ಯ ತುಂಬಿತ್ತು. ಸತತ ಒಂಬತ್ತು ದಿನಗಳ ಕಾಲ ಸುಡುಬಿಸಿಲಿನಲ್ಲಿ ರಿಕ್ಷಾ ತುಳಿಯುತ್ತಾ, ರಾತ್ರಿ ವೇಳೆ ಹಾದಿಬದಿಯ ಅಂಗಡಿ ಮುಂಗಟ್ಟುಗಳ ಮುಂದೆ ಆಶ್ರಯ ಪಡೆಯುತ್ತಾ ಅವರು ಕಟಕ್ ತಲುಪಿದರು. ಅಲ್ಲಿ ಸತತ ಎರಡು ತಿಂಗಳುಗಳ ಕಾಲ ಜ್ಯೋತಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಪತ್ನಿ ಸ್ವಲ್ಪ ಗುಣಮುಖರಾದ ನಂತರ, ಜನವರಿ 19 ರಂದು ಅದೇ ರಿಕ್ಷಾದಲ್ಲಿ ಇಬ್ಬರೂ ಮರಳಿ ತಮ್ಮೂರಿನತ್ತ ಪ್ರಯಾಣ ಆರಂಭಿಸಿದ್ದರು.

ಹಾದಿಯಲ್ಲಿ ಎದುರಾಯ್ತು ಅಪಘಾತ
ದುರದೃಷ್ಟವಶಾತ್ ಇವರ ಹಿಂದಿರುಗುವ ಹಾದಿ ಸುಗಮವಾಗಿರಲಿಲ್ಲ. ಚೌದ್ವಾರ್ ಎಂಬಲ್ಲಿ ವೇಗವಾಗಿ ಬಂದ ವಾಹನವೊಂದು ಇವರ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಜ್ಯೋತಿ ಅವರಿಗೆ ಮತ್ತೆ ಗಂಭೀರ ಗಾಯಗಳಾದವು. ಹತ್ತಿರದ ಆರೋಗ್ಯ ಕೇಂದ್ರಕ್ಕೆ ಇವರನ್ನು ದಾಖಲಿಸಿದಾಗ, ಅಲ್ಲಿನ ವೈದ್ಯ ಡಾ. ವಿಕಾಸ್ ಅವರು ಈ ದಂಪತಿಯ ಕಥೆ ಕೇಳಿ ಮರುಗಿದರು. ಚಿಕಿತ್ಸೆಯ ಜೊತೆಗೆ ಬಾಬು ಲೋಹರ್ ಅವರಿಗೆ ಆರ್ಥಿಕ ನೆರವನ್ನೂ ನೀಡಿದ ಡಾಕ್ಟರ್, ಅವರು ಸುರಕ್ಷಿತವಾಗಿ ತಮ್ಮೂರು ತಲುಪಲು ವ್ಯವಸ್ಥೆ ಮಾಡಿದರು. “ನಮಗೆ ನಾವಿಬ್ಬರೇ ಬಿಟ್ಟರೆ ಬೇರೆ ಯಾರೂ ಇಲ್ಲ” ಎಂದು ಕಣ್ಣೀರು ತುಂಬಿದ ಕಣ್ಣುಗಳಿಂದ ಹೇಳುವ ಬಾಬು ಲೋಹರ್ ಅವರ ಮಾತುಗಳು ಕಲ್ಲನ್ನೂ ಕರಗಿಸುವಂತಿದ್ದವು. ಜೀವನದ ಸಂಧ್ಯಾಕಾಲದಲ್ಲಿ ಪತ್ನಿಯೇ ಸರ್ವಸ್ವ ಎಂದು ಭಾವಿಸಿ ನಡೆಸಿದ ಈ ಸಾಹಸಮಯ ಪಯಣ ಈಗ ಇಡೀ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ : ಬಾಂಗ್ಲಾ ಕ್ರಿಕೆಟ್‌ನಲ್ಲಿ ಮತ್ತೆ ಬಿರುಗಾಳಿ | ವಿವಾದಿತ ನಿರ್ದೇಶಕ ನಜ್ಮುಲ್ ಇಸ್ಲಾಂ ಮರುನೇಮಕ!



















