ಅಮೇಥಿ: ಶೀಘ್ರದಲ್ಲೇ ಅತ್ಯಾಧುನಿಕ ಎಕೆ-203 ಅಸಾಲ್ಟ್ ರೈಫಲ್‌ಗಳು ಭಾರತೀಯ ಸಶಸ್ತ್ರ ಪಡೆಗಳ ಬತ್ತಳಿಕೆಯನ್ನು ಸೇರಲಿವೆ. ಉತ್ತರ ಪ್ರದೇಶದ ಅಮೇಥಿಯಲ್ಲಿ ‘ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್’ (IRRPL) ಎಂಬ ಜಂಟಿ ಉದ್ಯಮ ಕಂಪನಿಯು ‘ಶೇರ್’ ಎಂದು ಹೆಸರಿಸಲಾದ ಈ ರೈಫಲ್‌ಗಳ ಸ್ಥಳೀಯ ಉತ್ಪಾದನೆಯಲ್ಲಿ ತೊಡಗಿದೆ. ಈ ರೈಫಲ್‌ಗಳು ನಿಮಿಷಕ್ಕೆ 700 ಸುತ್ತು ಗುಂಡು ಹಾರಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, 800 ಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿದೆ.
5,200 ಕೋಟಿ ರೂ. ಒಪ್ಪಂದದ ಅಡಿಯಲ್ಲಿ, ಐಆರ್‌ಆರ್‌ಪಿಎಲ್ ಆರು ಲಕ್ಷಕ್ಕೂ ಹೆಚ್ಚು ರೈಫಲ್‌ಗಳನ್ನು ಸಶಸ್ತ್ರ ಪಡೆಗಳಿಗೆ ಪೂರೈಸಬೇಕಿದೆ. ಸಂಸ್ಥೆಯ ಮುಖ್ಯಸ್ಥ ಮೇಜರ್ ಜನರಲ್ ಎಸ್.ಕೆ. ಶರ್ಮಾ ಅವರು ಗುರುವಾರ ಮಾತನಾಡಿ, ಡಿಸೆಂಬರ್ 2030ರೊಳಗೆ ಪೂರೈಕೆಯನ್ನು ಪೂರ್ಣಗೊಳಿಸಲು ಉದ್ದೇಶಿಸಿರುವುದಾಗಿ ತಿಳಿಸಿದರು. “ಇದುವರೆಗೆ ಸುಮಾರು 48,000 ರೈಫಲ್‌ಗಳನ್ನು ಪೂರೈಸಲಾಗಿದೆ. ಮುಂದಿನ ಎರಡು-ಮೂರು ವಾರಗಳಲ್ಲಿ ಇನ್ನೂ 7,000 ಮತ್ತು ಈ ಡಿಸೆಂಬರ್ ವೇಳೆಗೆ ಹೆಚ್ಚುವರಿ 15,000 ರೈಫಲ್‌ಗಳನ್ನು ಹಸ್ತಾಂತರಿಸಲಾಗುವುದು” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಶೇರ್’ ರೈಫಲ್‌ನ ಪ್ರಮುಖ ವೈಶಿಷ್ಟ್ಯಗಳು
ಎಕೆ-203 ರೈಫಲ್‌ಗಳು ಎಕೆ-47 ಮತ್ತು ಎಕೆ-56 ರೈಫಲ್‌ಗಳಿಗಿಂತ ಹೆಚ್ಚು ಆಧುನಿಕವಾಗಿವೆ ಮತ್ತು ಕಲಾಶ್ನಿಕೋವ್ ಸರಣಿಯ ಅತ್ಯಂತ ಮಾರಕ ರೈಫಲ್‌ಗಳಲ್ಲಿ ಒಂದಾಗಿದೆ. ಇವು ಮೂರು ದಶಕಗಳಿಂದ ಸೇವೆಯಲ್ಲಿರುವ ಇಂಡಿಯನ್ ಸ್ಮಾಲ್ ಆರ್ಮ್ಸ್ ಸಿಸ್ಟಮ್ (INSAS) ರೈಫಲ್‌ಗಳನ್ನು ಬದಲಾಯಿಸಲಿವೆ.
ಕಾರ್ಟ್ರಿಡ್ಜ್: ಇನ್ಸಾಸ್ ರೈಫಲ್‌ಗಳು 5.56×45 ಎಂಎಂ ಕಾರ್ಟ್ರಿಡ್ಜ್ ಹೊಂದಿದ್ದರೆ, ಎಕೆ-203 ರೈಫಲ್‌ಗಳು ಹೆಚ್ಚು ಶಕ್ತಿಶಾಲಿ 7.62×39 ಎಂಎಂ ಕಾರ್ಟ್ರಿಡ್ಜ್ ಬಳಸುತ್ತವೆ.
ಮ್ಯಾಗಜಿನ್ ಸಾಮರ್ಥ್ಯ: ಇದರ ಮ್ಯಾಗಜಿನ್‌ನಲ್ಲಿ ಒಂದೇ ಬಾರಿಗೆ 30 ಕಾರ್ಟ್ರಿಡ್ಜ್‌ಗಳನ್ನು ತುಂಬಿಸಬಹುದು.
ತೂಕ: ಎಕೆ-203 ರೈಫಲ್ ಸುಮಾರು 3.8 ಕೆ.ಜಿ ತೂಕವಿದ್ದು, ಇನ್ಸಾಸ್ ರೈಫಲ್ (4.15 ಕೆ.ಜಿ) ಗಿಂತ ಹಗುರವಾಗಿದೆ.
ಉದ್ದ: ‘ಶೇರ್’ ರೈಫಲ್‌ಗಳು ಬಟ್‌ಸ್ಟಾಕ್ ಇಲ್ಲದೆ 705 ಎಂಎಂ ಉದ್ದವಿದ್ದರೆ, ಇನ್ಸಾಸ್ ರೈಫಲ್‌ಗಳು 960 ಎಂಎಂ ಉದ್ದವಿವೆ.
ಈ ರೈಫಲ್‌ಗಳನ್ನು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾರತೀಯ ಪಡೆಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇವು ಉತ್ತರದ ಮತ್ತು ಪಶ್ಚಿಮದ ಗಡಿಗಳಲ್ಲಿ, ಗಡಿ ನಿಯಂತ್ರಣ ರೇಖೆ ಮತ್ತು ವಾಸ್ತವಿಕ ನಿಯಂತ್ರಣ ರೇಖೆ (LAC) ಮತ್ತಿತರ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿತರಾದ ಸೈನಿಕರಿಗೆ ನೀಡಲಾಗುವ ಪ್ರಾಥಮಿಕ ಅಸಾಲ್ಟ್ ರೈಫಲ್‌ಗಳಾಗಿವೆ.