ಪ್ರತಿಯೊಬ್ಬ ಕ್ರೀಡಾಪಟುವಿಗೂ ಒಲಿಂಪಿಕ್ಸ್ ನಲ್ಲಿ ಬಾಗವಹಿಸಬೇಕೆಂಬ ಕನಸಿರುತ್ತದೆ. ಎಷ್ಟೇ ಕಷ್ಟವಾದರೂ ಒಂದು ಬಾರಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ, ಪದಕಕ್ಕೆ ಮುತ್ತಿಕ್ಕಬೇಕೆನ್ನುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಾಗಿರುತ್ತದೆ. ಹಲವರು ಇದಕ್ಕಾಗಿ ತಪಸ್ಸಿನಂತೆ ಅಭ್ಯಾಸ ಮಾಡಿರುತ್ತಾರೆ. ಈಜಿಪ್ಟ್ ನ ಫೆನ್ಸರ್ ನಾಡಾ ಹಫೀಜ್ ಇವರೆಲ್ಲರಿಗೂ ಆದರ್ಶವಾಗಿ ನಿಂತಿದ್ದಾರೆ.
ಹೌದು! ಅವರು ಬರೋಬ್ಬರಿ 7 ತಿಂಗಳ ಗರ್ಭಿಣಿಯಾಗಿದ್ದರೂ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದಾರೆ. ಭಾಗವಹಿಸುವ ಅವಕಾಶ ಸಿಕ್ಕರೂ ಅವರು ಭಾಗವಹಿಸುವ ಪರಿಸ್ಥಿತಿಯಲ್ಲಿರಲಿಲ್ಲ. ಆದರೂ ಒಲಿಂಪಿಕ್ಸ್ ವೇದಿಕೆಯಲ್ಲೇ ತಾಯ್ತನವನ್ನು ಸಂಭ್ರಮಿಸಬೇಕೆಂಬ ಕಾರಣಕ್ಕೆ ಎಲ್ಲ ಮಹಿಳೆಯರಿಗೆ ಒಂದು ಸಂದೇಶ ನೀಡಬೇಕೆಂಬ ಕಾರಣಕ್ಕೆ 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ ಇವರು, 16ನೇ ಸುತ್ತಿನಲ್ಲಿ ಭಾರೀ ಸೆಣಸಾಟ ನಡೆಸಿ ಸೋಲು ಕಂಡಿದ್ದಾರೆ. ಈ ಮೂಲಕ ಪ್ರೆಗ್ನೆನ್ಸಿ ಅಥವಾ ಬಾಣಂತನವೆಂಬುದು ಹೆಣ್ಣಿನ ಸಾಧನೆಗೆ ಯಾವ ಅಡ್ಡಿ ಮಾಡುವುದಿಲ್ಲ ಎಂಬುವುದನ್ನು ಪ್ರಪಂಚಕ್ಕೆ ತೋರಿಸಿ ಕೊಟ್ಟಿದ್ದಾರೆ.
ನಾಡಾ ಹಫೀಜ್ ಎಂಬುವವರೇ ಈ ಗಟ್ಟಿಗಿತ್ತಿ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಾಡಾ ಹಫೀಜ್, ತಾನು 7 ತಿಂಗಳ ಗರ್ಭಿಣಿಯಾಗಿದ್ದುಕೊಂಡೇ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿಕೊಳ್ಳುವವರೆಗೂ ಈ ವಿಷಯ ಬಹುತೇಕರಿಗೆ ತಿಳಿದಿರಲಿಲ್ಲ. ಆಕೆಯ ಧೈರ್ಯಕ್ಕೆ ಹಾಗೂ ಬದ್ಧತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈಜಿಪ್ಟಿನ ಫೆನ್ಸರ್ ನಡಾ ಹಫೀಜ್ 7 ತಿಂಗಳ ಗರ್ಭಿಣಿಯಾಗಿದ್ದಾಗ ಸ್ಪರ್ಧಿಸುವ ಮೂಲಕ ಪ್ಯಾರಿಸ್ 2024 ಒಲಿಂಪಿಕ್ಸ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 26ನೇ ವಯಸ್ಸಿನ ನಾಡಾ ಹಫೀಜ್ ತನ್ನ ಮೂರನೇ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ವೈಯಕ್ತಿಕ ಸೇಬರ್ ಸ್ಪರ್ಧೆಯಲ್ಲಿ ತನ್ನ ಮೊದಲ ಪಂದ್ಯ ಗೆದ್ದಿದ್ದರು. 26 ವರ್ಷದ ಹಫೀಜ್ ಮಹಿಳೆಯರ ವೈಯಕ್ತಿಕ ಫೆನ್ಸಿಂಗ್ ಸ್ಪರ್ಧೆಯಲ್ಲಿ USAಯ ಎಲಿಜಬೆತ್ ಟಾರ್ಟಕೋವ್ಸ್ಕಿ ವಿರುದ್ಧ ತಮ್ಮ ಮೊದಲ ಪಂದ್ಯವನ್ನು 15-13 ರಲ್ಲಿ ಗೆದ್ದಿದ್ದರು. ನಂತರ 16ನೇ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿಯೋನ್ ಹಯಾಂಗ್ ಅವರನ್ನು ಎದುರಿಸಿ ಸೋಲು ಕಂಡಿದ್ದಾರೆ.
ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಒಲಿಂಪಿಕ್ಸ್ ಸ್ಟೇಜ್ ಮೇಲೆ ಇಬ್ಬರು ಆಟಗಾರರು ಎದುರಾಳಿಯಾಗಿ ಆಡುತ್ತಿದ್ದಾರೆ ಎಂದು ನಿಮಗೆ ಕಾಣಿಸಬಹುದು. ಆದರೆ, ನಿಜವಾಗಿ ನಾವು ಮೂವರಿದ್ದೇವೆ! ಅದು ನಾನು, ನನ್ನ ಪ್ರತಿಸ್ಪರ್ಧಿ ಮತ್ತು ಈ ಜಗತ್ತಿಗೆ ಇನ್ನೂ ಕಾಲಿಡಬೇಕಿರುವ ನನ್ನ ಪುಟ್ಟ ಮಗು! ನಾನೀಗ 7 ತಿಂಗಳ ಗರ್ಭಿಣಿ. ನನ್ನ ಮಗು ಮತ್ತು ನಾನು ದೈಹಿಕ ಮತ್ತು ಭಾವನಾತ್ಮಕ ಎರಡೂ ರೀತಿಯಲ್ಲಿ ಎಲ್ಲವನ್ನೂ ಶೇರ್ ಮಾಡಿಕೊಳ್ಳುತ್ತಿದ್ದೇವೆ. ಈ ಬಾರಿಯ ಸ್ಪರ್ಧೆ ನನಗೆ ಬಹಳ ವಿಶೇಷವಾದುದು. ನಾನು ಈ ಬಾರಿ ಪುಟ್ಟ ಒಲಿಂಪಿಯನ್ ನನ್ನು ನನ್ನೊಳಗೆ ಹೊತ್ತು ವೇದಿಕೆ ಏರುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನಾಡಾ ಇದೇ ಮೊದಲ ಬಾರಿಗೆ ಸ್ಪರ್ಧಿಸಿಲ್ಲ. 2016ರ ರಿಯೊ ಒಲಿಂಪಿಕ್ಸ್ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದರು.
ಮೂರು ಬಾರಿ ಒಲಿಂಪಿಯನ್ ಮತ್ತು ವೈದ್ಯಕೀಯದಲ್ಲಿ ಪದವಿ ಹೊಂದಿರುವ ಮಾಜಿ ಜಿಮ್ನಾಸ್ಟ್ ಹಫೀಜ್, 2019ರ ಆಫ್ರಿಕನ್ ಗೇಮ್ಸ್‌ನಲ್ಲಿ ವೈಯಕ್ತಿಕ ಮತ್ತು ತಂಡದ ಸೇಬರ್ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.