ಶಿಮ್ಲಾ: ಹಿಮಾಚಲ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮೇಘಸ್ಫೋಟ, ಪ್ರವಾಹ ಮತ್ತು ಸರಣಿ ಭೂಕುಸಿತಗಳು ರಾಜ್ಯಾದ್ಯಂತ ಸಾವಿನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಶುಕ್ರವಾರದ ವೇಳೆಗೆ ಮಳೆ ಸಂಬಂಧಿ ದುರ್ಘಟನೆಗಳಿಗೆ ಬಲಿಯಾದವರ ಸಂಖ್ಯೆ 63ಕ್ಕೆ ಏರಿದೆ. ಇನ್ನೂ ಡಜನ್‌ಗಟ್ಟಲೆ ಜನರು ನಾಪತ್ತೆಯಾಗಿದ್ದಾರೆ. ಮುಂಗಾರು ಅಬ್ಬರಕ್ಕೆ 400 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಜುಲೈ 7ರ ಸೋಮವಾರದವರೆಗೂ ರಾಜ್ಯದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಂಡಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ:
ಈ ಬಾರಿಯ ಮಳೆ ದುರಂತದಲ್ಲಿ ಮಂಡಿ ಜಿಲ್ಲೆ ಅತಿ ಹೆಚ್ಚು ನಷ್ಟ ಅನುಭವಿಸಿದೆ. ಮಂಡಿಯೊಂದರಲ್ಲೇ 17 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಜೈರಾಮ್ ಠಾಕೂರ್ ಅವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಥುನಾಗ್ ಮತ್ತು ಬಗ್ಸಾಯದ್ ಪ್ರದೇಶಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಮಂಡಿಯ ಕರ್ಸೋಗ್ ಮತ್ತು ಧರಂಪುರ ಭಾಗಗಳಲ್ಲೂ ಭಾರಿ ಹಾನಿಯಾಗಿದ್ದು, ಇದೊಂದೇ ಜಿಲ್ಲೆಯಿಂದ 40 ಜನರು ನಾಪತ್ತೆಯಾಗಿರುವುದು ವರದಿಯಾಗಿದೆ.
ಕೊಚ್ಚಿಹೋದ ಹಳ್ಳಿಗಳು, ಸೇತುವೆಗಳು ನಾಪತ್ತೆ
ಮಂಡಿಯ ಜೊತೆಗೆ ಕಂಗ್ರಾದಲ್ಲಿ 13, ಚಂಬಾದಲ್ಲಿ 6 ಮತ್ತು ರಾಜಧಾನಿ ಶಿಮ್ಲಾದಲ್ಲಿ 5 ಸಾವುಗಳು ವರದಿಯಾಗಿವೆ. ಬಿಲಾಸ್‌ಪುರ, ಹಮೀರ್‌ಪುರ, ಕಿನ್ನೌರ್, ಕುಲ್ಲು, ಲಾಹೌಲ್-ಸ್ಪಿಟಿ, ಸಿರ್ಮೌರ್, ಸೋಲನ್, ಮತ್ತು ಉನಾ ಜಿಲ್ಲೆಗಳಲ್ಲೂ ಸಾವುನೋವುಗಳು ಸಂಭವಿಸಿವೆ. ರಾಜ್ಯದಾದ್ಯಂತ ನೂರಾರು ಮನೆಗಳು ನೆಲಸಮಗೊಂಡಿವೆ ಮತ್ತು 14 ಪ್ರಮುಖ ಸೇತುವೆಗಳು ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿವೆ. ಹಳ್ಳಿಗಳಿಗೆ ಹಳ್ಳಿಗಳೇ ಕೊಚ್ಚಿಹೋಗಿದ್ದು, ಸುಮಾರು 300 ಜಾನುವಾರುಗಳು ನಾಪತ್ತೆಯಾಗಿವೆ. 164 ಜಾನುವಾರುಗಳು ಮೃತಪಟ್ಟಿವೆ.
ಜನಜೀವನ ಅಸ್ತವ್ಯಸ್ತ:
ಮಳೆಯು ಸೃಷ್ಟಿಸಿದ ಅವಾಂತರದಿಂದಾಗಿ ರಾಜ್ಯದಾದ್ಯಂತ 500ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿವೆ. ಸುಮಾರು 500ಕ್ಕೂ ಅಧಿಕ ವಿದ್ಯುತ್ ವಿತರಣಾ ಟ್ರಾನ್ಸ್‌ಫಾರ್ಮರ್‌ಗಳು (DTR) ಕಾರ್ಯ ಸ್ಥಗಿತಗೊಳಿಸಿದ್ದು, ಲಕ್ಷಾಂತರ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಕುಡಿಯುವ ನೀರು ಮತ್ತು ಆಹಾರದ ಕೊರತೆ ತಲೆದೋರಿದ್ದು, ಇದು ಮಾನವೀಯ ಬಿಕ್ಕಟ್ಟಾಗಿ ಪರಿಣಮಿಸುವ ಆತಂಕವಿದೆ.

ಕೇಂದ್ರದಿಂದ ನೆರವಿನ ಭರವಸೆ
ನದಿಗಳು ಆರ್ಭಟಿಸುತ್ತಾ, ಇಡೀ ಮನೆಗಳನ್ನು ಕೊಚ್ಚಿಕೊಂಡು ಹೋಗುತ್ತಿರುವ ಭಯಾನಕ ದೃಶ್ಯಗಳು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿವೆ. ಶಿಮ್ಲಾದ ಧಲ್ಲಿ ಉಪನಗರದಲ್ಲಿ ನಡೆದ ಭಾರಿ ಭೂಕುಸಿತದ ವಿಡಿಯೋಗಳು ದಿಗಿಲು ಹುಟ್ಟಿಸಿವೆ. ಸಿರ್ಮೌರ್ ಜಿಲ್ಲೆಯಲ್ಲಿ ಬಂಡೆಗಳು ಮತ್ತು ಮಣ್ಣಿನ ಪ್ರವಾಹ ಬೆಟ್ಟದ ಬದಿಯಿಂದ ಕೆಳಗೆ ಅಪ್ಪಳಿಸುತ್ತಿರುವ ವಿಡಿಯೋಗಳು ಜೀವಭಯವನ್ನುಂಟು ಮಾಡಿವೆ.
ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗಿವೆ.



















