ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಸತತ ಮೂರು ಬಾರಿ ಫೈನಲ್ ತಲುಪಿದರೂ ಚಾಂಪಿಯನ್ ಪಟ್ಟಕ್ಕೇರಲು ವಿಫಲವಾಗಿರುವ ಡೆಲ್ಲಿ ಕ್ಯಾಪಿಟಲ್ಸ್, 2026ರ ಮೆಗಾ ಹರಾಜಿಗೆ ಹೊಸ ರಣತಂತ್ರದೊಂದಿಗೆ ಸಜ್ಜಾಗಿದೆ. ತಂಡದ ಪ್ರಮುಖ ಆಧಾರಸ್ತಂಭವಾಗಿದ್ದ ನಾಯಕಿ ಮೆಗ್ ಲ್ಯಾನಿಂಗ್ ಅವರನ್ನು ಕೈಬಿಟ್ಟಿರುವ ಫ್ರಾಂಚೈಸಿ, ಇದೀಗ ಬ್ಯಾಟಿಂಗ್ ವಿಭಾಗಕ್ಕೆ ಹೊಸ ರೂಪ ನೀಡುವ ಯೋಜನೆಯಲ್ಲಿದೆ. ನವೆಂಬರ್ 27ರಂದು ನವದೆಹಲಿಯಲ್ಲಿ ನಡೆಯಲಿರುವ ಹರಾಜಿನಲ್ಲಿ, 6 ಪ್ರಮುಖ ಬ್ಯಾಟರ್‌ಗಳ ಮೇಲೆ ತಂಡ ಗಮನಹರಿಸಿದೆ ಎಂದು ತಿಳಿದುಬಂದಿದೆ.
ಶಫಾಲಿಗೆ ವಿದೇಶಿ ಜೋಡಿದಾರ ಹುಡುಕಾಟ
ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಅನುಭವಿ ವಿದೇಶಿ ಆಟಗಾರ್ತಿಯ ಅವಶ್ಯಕತೆಯಿದೆ. ಆಸ್ಟ್ರೇಲಿಯಾದ ಯುವ ಎಡಗೈ ಬ್ಯಾಟರ್ ಫೋಬೆ ಲಿಚ್‌ಫೀಲ್ಡ್ ಅವರು ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಪವರ್‌ಪ್ಲೇನಲ್ಲಿ ವೇಗವಾಗಿ ರನ್ ಕಲೆಹಾಕುವ ಸಾಮರ್ಥ್ಯ ಮತ್ತು ದಾಳಿಕೋರ ಆಟಕ್ಕೆ ಖ್ಯಾತಿ ಪಡೆದಿರುವ ಲಿಚ್‌ಫೀಲ್ಡ್, ತಂಡದ ಭವಿಷ್ಯಕ್ಕೆ ದೀರ್ಘಕಾಲದ ಹೂಡಿಕೆಯಾಗಬಲ್ಲರು.
ಇನ್ನೊಂದು ಆಯ್ಕೆಯೆಂದರೆ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್. ಇನ್ನಿಂಗ್ಸ್ ಕಟ್ಟುವಲ್ಲಿ ನಿಪುಣೆ ಹೊಂದಿರುವ ವೊಲ್ವಾರ್ಡ್, ಲ್ಯಾನಿಂಗ್ ಅವರ ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯ ಮತ್ತು ನಾಯಕತ್ವದ ಗುಣ ಹೊಂದಿರುವುದರಿಂದ ತಂಡಕ್ಕೆ ಸ್ಥಿರತೆ ಒದಗಿಸಬಹುದು. ಈ ಎರಡೂ ಆಯ್ಕೆಗಳಲ್ಲಿ ಯಾವುದು ತಂಡಕ್ಕೆ ಸರಿಹೊಂದುತ್ತದೆ ಎಂಬುದು ಹರಾಜಿನಲ್ಲಿ ತೀರ್ಮಾನವಾಗಲಿದೆ.
ವಿಕೆಟ್ ಕೀಪರ್ ಕೊರತೆಗೆ ಪರಿಹಾರ
ತಂಡದಲ್ಲಿ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ. ಈ ಸ್ಥಾನಕ್ಕೆ ಭಾರತೀಯ ಪ್ರತಿಭೆಗಳಾದ ಯಾಸ್ತಿಕಾ ಭಾಟಿಯಾ ಮತ್ತು ಕಿರಣ್ ನವಗಿರೆ ಹೆಸರುಗಳು ಕೇಳಿಬರುತ್ತಿವೆ. ಯಾಸ್ತಿಕಾ ಅವರು ಅಗ್ರ ಕ್ರಮಾಂಕದಲ್ಲಿ ಆಡಬಲ್ಲವರಾಗಿದ್ದು, ವಿಕೆಟ್ ಕೀಪಿಂಗ್ ಜೊತೆಗೆ ಎಡಗೈ ಬ್ಯಾಟರ್ ಆಗಿರುವುದು ಅವರ ಪ್ಲಸ್ ಪಾಯಿಂಟ್. ಇನ್ನು ಕಿರಣ್ ನವಗಿರೆ ಅವರು ದೇಶೀಯ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಪಂದ್ಯದ ಗತಿಯನ್ನು ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಈ ಪಟ್ಟಿಯಲ್ಲಿ ಕರ್ನಾಟಕದ ಭರವಸೆಯ ಬ್ಯಾಟರ್ ವೃಂದಾ ದಿನೇಶ್ ಕೂಡ ಇದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ವೃಂದಾ, ಅಗ್ರ ಕ್ರಮಾಂಕದಲ್ಲಿ ತಂಡಕ್ಕೆ ಬಲವರ್ಧನೆಯಾಗಬಹುದು ಎಂಬುದು ತಜ್ಞರ ಅಭಿಪ್ರಾಯ.
ಮಧ್ಯಮ ಕ್ರಮಾಂಕಕ್ಕೆ ಆಲ್‌ರೌಂಡರ್‌ಗಳು
ಜೆಮಿಮಾ ರೋಡ್ರಿಗಸ್, ಅನ್ನಾಬೆಲ್ ಸದರ್‌ಲ್ಯಾಂಡ್ ಮತ್ತು ಮರಿಜಾನ್ ಕ್ಯಾಪ್ ಅವರನ್ನು ಉಳಿಸಿಕೊಂಡಿರುವುದರಿಂದ ಮಧ್ಯಮ ಕ್ರಮಾಂಕಕ್ಕೆ ಸ್ವಲ್ಪ ಬಲವಿದ್ದರೂ, ಹೆಚ್ಚುವರಿ ಬೆಂಬಲ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಲ್‌ರೌಂಡರ್ ಹರ್ಲೀನ್ ಡಿಯೋಲ್ ಅವರು ಉತ್ತಮ ಆಯ್ಕೆಯಾಗಬಲ್ಲರು. ಸ್ಪಿನ್ ಬೌಲಿಂಗ್ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ಶ್ರೇಷ್ಠ ಫೀಲ್ಡಿಂಗ್ ಇವರ ಬಲವಾಗಿದೆ.
ಇನ್ನೊಂದು ಆಯ್ಕೆಯೆಂದರೆ ಸ್ಕಾಟ್ಲೆಂಡ್‌ನ ಸಾರಾ ಬ್ರೈಸ್. ಅಸೋಸಿಯೇಟ್ ರಾಷ್ಟ್ರದ ಪ್ರತಿಭೆಯಾಗಿರುವ ಬ್ರೈಸ್, ಕಡಿಮೆ ಬೆಲೆಗೆ ಸಿಗಬಲ್ಲ ಉತ್ತಮ ಫಿನಿಶರ್ ಮತ್ತು ವಿಕೆಟ್ ಕೀಪರ್ ಆಯ್ಕೆಯಾಗಬಹುದು. ಮಧ್ಯಮ ಕ್ರಮಾಂಕದಲ್ಲಿ ಆಟದ ಅಂತಿಮ ಹಂತದಲ್ಲಿ ರನ್ ಗಳಿಸುವ ಸಾಮರ್ಥ್ಯ ಇವರಲ್ಲಿದೆ.
ಅಲ್ಪ ಬಜೆಟ್, ದೊಡ್ಡ ಸವಾಲು
ಐವರು ಆಟಗಾರರನ್ನು ಉಳಿಸಿಕೊಂಡಿರುವ ಡೆಲ್ಲಿ ಬಳಿ ಕೇವಲ 5.70 ಕೋಟಿ ರೂಪಾಯಿ ಮಾತ್ರ ಉಳಿದಿದೆ. ಈ ಸೀಮಿತ ಮೊತ್ತದಲ್ಲಿ ಕನಿಷ್ಠ 10 ಆಟಗಾರರನ್ನು ಖರೀದಿಸಬೇಕಾದ ಸವಾಲು ಫ್ರಾಂಚೈಸಿ ಮುಂದಿದೆ. ಜೆಮಿಮಾ ರೋಡ್ರಿಗಸ್, ಅನ್ನಾಬೆಲ್ ಸದರ್‌ಲ್ಯಾಂಡ್ ಮತ್ತು ಮರಿಜಾನ್ ಕ್ಯಾಪ್ ಅವರನ್ನು 2.20 ಕೋಟಿ ರೂಪಾಯಿಗೆ, ಶಫಾಲಿ ವರ್ಮಾ ಅವರನ್ನು 2 ಕೋಟಿಗೆ ಮತ್ತು ನಿಕ್ಕಿ ಪ್ರಸಾದ್ ಅವರನ್ನು 50 ಲಕ್ಷಕ್ಕೆ ಉಳಿಸಿಕೊಂಡಿರುವ ತಂಡಕ್ಕೆ, ಆರ್‌ಟಿಎಂ ಕಾರ್ಡ್ ಕೂಡ ಲಭ್ಯವಿಲ್ಲದಿರುವುದು ಆಯ್ಕೆಗಳನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ತಜ್ಞರ ಅಭಿಪ್ರಾಯ
ಕ್ರಿಕೆಟ್ ವಿಶ್ಲೇಷಕರ ಪ್ರಕಾರ, ಮೆಗ್ ಲ್ಯಾನಿಂಗ್ ಅವರನ್ನು ಕೈಬಿಟ್ಟಿದ್ದು ತಂಡದ ಪಾಲಿಗೆ ದೊಡ್ಡ ಜೂಜು. ಆದರೆ, ಭವಿಷ್ಯದ ತಂಡ ಕಟ್ಟುವ ದೃಷ್ಟಿಯಿಂದ ಇದು ಅನಿವಾರ್ಯವಾಗಿರಬಹುದು. ಹರಾಜಿನಲ್ಲಿ ಸ್ಮಾರ್ಟ್ ಖರೀದಿ ಮಾಡದಿದ್ದರೆ, ಡೆಲ್ಲಿಗೆ ಈ ಬಾರಿಯೂ ಟ್ರೋಫಿ ದೂರವಾಗಬಹುದು ಎಂಬುದು ಅವರ ಎಚ್ಚರಿಕೆಯಾಗಿದೆ
ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಎದುರು ಮಾರ್ಕೊ ಜಾನ್ಸೆನ್ ಸವಾಲು ; ‘ವೀಕ್‌ನೆಸ್’ ಮೆಟ್ಟಿ ನಿಲ್ಲಲು ವಿಶೇಷ ತಾಲೀಮು!



















