ಬೆಂಗಳೂರು: ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಷಯದಲ್ಲಿ ಈಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ.
89.62 ಕೋಟಿ ರೂ. ಅಕ್ರಮ ವರ್ಗಾವಣೆಯಾಗಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಈಗ ಕೋರ್ಟ್ ನಿಂದಾಗಿ ರಿಲೀಫ್ ಸಿಕ್ಕಂತಾಗಿದೆ. ಈ ಪ್ರಕರಣದ ತನಿಖೆ ಕೈಗೊಂಡಿದ್ದ ವೇಳೆ ನಿಗಮದ ಏಳು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಸದ್ಯ ಈ ಪೈಕಿ 6.11 ಕೋಟಿ ರೂ.ನಿಗಮಕ್ಕೆ ರಿಲೀಸ್ ಮಾಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಐಡಿ ಎಸ್ ಐಟಿಗೆ ಸೂಚಿಸಿದೆ. ಹೀಗಾಗಿ ವಹಿವಾಟು ನಡೆಸದಂತೆ ಇದ್ದ ನಿರ್ಬಂಧ ತೆರೆದಂತಾಗಿದೆ.
ನಿಗಮದ ನಿಶ್ಚಿತ ಠೇವಣಿ ಖಾತೆಯಿಂದ 89.62 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣ ಬಯಲಾದ ನಂತರ ಎಸ್‌ಐಟಿ ತಂಡ, ನಿಗಮದ ಏಳು ಖಾತೆಗಳಲ್ಲಿದ್ದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಅವರಿಗೆ ಅ. 10ರಂದು ಪತ್ರ ಬರೆದಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪಕಾರ್ಯದರ್ಶಿ, ಎಸ್‌ಐಟಿ ಮುಟ್ಟುಗೋಲು ಹಾಕಿಕೊಂಡಿರುವ ನಿಗಮದ ಖಾತೆಗಳ ಹಣ ವಾಪಸ್ ಪಡೆಯಲು ಅನುಮತಿ ನೀಡುವಂತೆ ಕೋರಿದ್ದರು. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಖಾತೆಗಳಲ್ಲಿನ ಹಣ ರಿಲೀಸ್ ಮಾಡಿಸಿಕೊಳ್ಳಬಹುದು ಎಂದು ಅನುಮೋದನೆ ನೀಡಲಾಗಿತ್ತು. ಸದ್ಯ ಕೋರ್ಟ್, ಮುಟ್ಟುಗೋಲು ಹಾಕಿಕೊಂಡಿರುವ 6,11,72,400 ರೂ. ಬಿಡುಗಡೆ ಮಾಡಬೇಕು ಎಂದು ಪ್ರಕರಣದ ತನಿಖಾಧಿಕಾರಿಗೆ ಆದೇಶಿಸಿದೆ.
ಅಲ್ಲದೇ, ನಿಗಮದ ಖಾತೆಯಿಂದ ದೋಚಿದ್ದ ಹಣದಲ್ಲಿ ಖರೀದಿಸಿದ್ದ ಐಷಾರಾಮಿ ಲ್ಯಾಂಬೋರ್ಗಿನಿ ಹಾಗೂ ಕಿಯಾ ಕಾರುಗಳನ್ನು ಹಣ ಕಟ್ಟಿಸಿಕೊಂಡು ಮಾಲಕಿಗೆ ವಾಪಸ್ ನೀಡಿ ಎಂದು ನ್ಯಾಯಾಲಯ ಎಸ್ ಐಟಿಗೆ ತಿಳಿಸಿದೆ.
2024ರ ಮೇ ತಿಂಗಳಲ್ಲಿ ಬೆಳಕಿಗೆ ಬಂದಿದ್ದ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಬಹುತೇಕ ಮುಗಿಸಿದೆ. ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ. ಅಕ್ರಮವಾಗಿ ವರ್ಗಾವಣೆಯಾಗಿದ್ದ 89.62 ಕೋಟಿ ರೂ. ಪೈಕಿ ಆರೋಪಿಗಳಿಂದ ಚಿನ್ನಾಭರಣ, ಐಷಾರಾಮಿ ಕಾರುಗಳು, ನಗದು ಸೇರಿದಂತೆ ಸುಮಾರು 75 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಜಪ್ತಿ ಮಾಡಿದೆ ಎನ್ನಲಾಗಿದೆ.