ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗರ್ಭಿಣಿಯರಿಗೆ ಕೇಂದ್ರ ಸರ್ಕಾರವು ಸಹಾಯಧನ ನೀಡಲು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಜಾರಿಗೆ ತಂದಿದೆ. ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸಿಗುವಂತಾಗಲಿ ಎಂದು ಯೋಜನೆ ಜಾರಿಗೆ ತಂದಿದೆ. ಇದರ ಅನ್ವಯ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಕೇಂದ್ರ ಸರ್ಕಾರವು ಯೋಜನೆ ಅಡಿಯಲ್ಲಿ 5 ಸಾವಿರ ರೂಪಾಯಿ ಸಹಾಯಧನ ನೀಡುತ್ತಿದೆ.
ಮೂರು ಕಂತುಗಳಲ್ಲಿ ಹಣವನ್ನು ನೀಡಲಾಗುತ್ತದೆ. ಮಹಿಳೆಯೊಬ್ಬರು ಗರ್ಭ ಧರಿಸಿದ 6 ತಿಂಗಳೊಳಗೆ ಅರ್ಜಿ ಸಲ್ಲಿಸಿದರೆ, ಅವರಿಗೆ ಮೊದಲ ಕಂತಿನಲ್ಲಿ 1 ಸಾವಿರ ರೂ. ನೀಡಲಾಗುತ್ತದೆ. ಇನ್ನು, ಗರ್ಭ ಧರಿಸಿದ 6 ತಿಂಗಳ ಬಳಿ ಅವರ ಖಾತೆಗೆ 2 ಸಾವಿರ ರೂ. ಜಮೆಯಾಗುತ್ತದೆ. ಇನ್ನು, ಮಗು ಜನಿಸಿ, ಮಗುವಿನ ಜನನ ಪ್ರಮಾಣಪತ್ರ ಪಡೆಯುತ್ತಲೇ ಮತ್ತೆ 2 ಸಾವಿರ ರೂ. ನೀಡಲಾಗುತ್ತದೆ. ಹೀಗೆ ಮೂರು ಕಂತುಗಳಲ್ಲಿ 5 ಸಾವಿರ ರೂಪಾಯಿ ನೀಡಲಾಗುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಬಡ ಮಹಿಳೆಯರಲ್ಲಿ ಅಪೌಷ್ಟಿಕಾಂಶ ಇರುತ್ತದೆ. ಅವರು ಗರ್ಭ ಧರಿಸಿದ ಬಳಿಕ ಪೌಷ್ಟಿಕಾಂಶಯುತ ಆಹಾರ ಸೇವಿಸುವುದು ಮುಖ್ಯವಾಗಿರುತ್ತದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರವು ಮಹತ್ವದ ಯೋಜನೆ ಜಾರಿಗೆ ತಂದಿದೆ. ಸರ್ಕಾರಿ ನೌಕರರು ಹಾಗೂ ಈಗಾಗಲೇ ಇಂತಹ ಬೇರೆ ಯೋಜನೆಯ ಲಾಭ ಪಡೆಯುತ್ತಿರುವವರು ಬಿಟ್ಟು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಯಾವ ಮಹಿಳೆಯರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವವರಿಗೆ 6 ಸಾವಿರ ರೂ. ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸುವವರು ಮೊದಲಿಗೆ http://wcd. nic.in ಗೆ ಭೇಟಿ ನೀಡಿ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಬೇಕು. ಇದಾದ ಬಳಿಕ ಅಗತ್ಯ ಮಾಹಿತಿ, ದಾಖಲೆಯನ್ನು ಒದಗಿಸಿ, ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ನೀಡಬೇಕು.
ಇದನ್ನೂ ಓದಿ: LPG ಸಿಲಿಂಡರ್ ಬಳಸುವ ಸಾರ್ವಜನಿಕರೇ ಗಮನಿಸಿ : ನಿಮಗಿದೆ 50 ಲಕ್ಷ ರೂ. ವಿಮೆ ಕವರೇಜ್



















