ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ರಜೆ, ಒತ್ತಡ ನಿವಾರಣೆ, ಕೆಲಸ ಹಾಗೂ ಜೀವನದ ಮಧ್ಯೆ ಸಮತೋಲನ ಕಾಪಾಡಿಕೊಳ್ಳಲು ಸರ್ಕಾರಿ ನೌಕರರಿಗೆ ವರ್ಷಕ್ಕೆ 42 ಹೆಚ್ಚುವರಿ ರಜೆಗಳನ್ನು ಮಂಜೂರು ಮಾಡಿ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಆದೇಶ ಹೊರಡಿಸಿದೆ. ಇದರಿಂದಾಗಿ ಸುಮಾರು 50 ಲಕ್ಷ ನೌಕರರಿಗೆ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರು ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ. ಹೆಚ್ಚುವರಿ ಕೆಲಸಗಳನ್ನು ಕೂಡ ಮಾಡಿದ್ದಾರೆ. ಅಲ್ಲದೆ, ಬದಲಾದ ಕಾಲಘಟ್ಟದಲ್ಲಿ ನೌಕರರಿಗೆ ಬಿಡುವುದು, ಕೆಲಸ ಹಾಗೂ ಜೀವನದ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವುದು, ಪ್ರವಾಸ, ಕುಟುಂಬಸ್ಥರೊಂದಿಗೆ ಕಾಲ ಕಳೆಯುವುದು ಪ್ರಮುಖ ಸಂಗತಿಯಾಗಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸರ್ಕಾರವು ಬೋನಸ್ ರಜೆಗಳನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.
2025ರ ಜುಲೈ 1ರಿಂದಲೇ ನೂತನ ರಜೆ ನೀತಿ ಜಾರಿಗೆ ಬರುತ್ತಿದೆ. ಅಂದರೆ, ಸರ್ಕಾರಿ ನೌಕರರಿಗೆ ಇದೇ ವರ್ಷದಿಂದ ಹೆಚ್ಚುವರಿಯಾಗಿ ರಜೆಗಳು ಸಿಗಲಿವೆ. ನೌಕರರಿಗೆ ಈಗಿರುವ ಸಿಎಲ್, ಅರ್ನ್ಡ್ ಲೀವ್, ಮೆಡಿಕಲ್ ಲೀವ್ ಗಳ ಜತೆಗೆ ಹೆಚ್ಚುವರಿಯಾಗಿ 42 ರಜೆಗಳು ಸಿಗಲಿವೆ. ಒಂದು ವರ್ಷಕ್ಕೆ ಇಷ್ಟು ರಜೆಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ.
ಎಲ್ಲರಿಗೂ ಸಿಗುವುದಿಲ್ಲ
ಕೇಂದ್ರ ಸರ್ಕಾರದ ಎಲ್ಲ ನೌಕರರಿಗೆ ಬೋನಸ್ ರಜೆಗಳು ಸಿಗುವುದಿಲ್ಲ. ಕಾಯಂ ನೌಕರಿಯಲ್ಲಿರುವವರು, ಕೆಲಸಕ್ಕೆ ಸೇರಿ ಒಂದು ವರ್ಷವಾದವರಿಗೆ ಮಾತ್ರ ಬೋನಸ್ ರಜೆಗಳು ಸಿಗುತ್ತವೆ. ಅರೆಕಾಲಿಕ ಅಥವಾ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ನೌಕರರಿಗೆ 42 ರಜೆಗಳು ಹೆಚ್ಚುವರಿಯಾಗಿ ಸಿಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.


















