ನವದೆಹಲಿ: ದೇಶದಲ್ಲಿ ದಿನೇ ದಿನೇ ಭೂಕಂಪಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಮಂಗಳವಾರ ಬೆಳಗ್ಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲೂ ಪ್ರಬಲ ಭೂಕಂಪ ಸಂಭವಿಸಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ 5.1 ತೀವ್ರತೆಯ ಭೂಕಂಪನದಿಂದಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಭೂಮಿ ಕಂಪಸಿದೆ. ಒಡಿಶಾದ ಪುರಿ ಬಳಿ ಬೆಳಗ್ಗೆ 6.10 ಕ್ಕೆ ಭೂಕಂಪ ಸಂಭವಿಸಿದೆ. ಆದರೆ, ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ.
ಒಡಿಶಾದ ಬೆರ್ಹಾಂಪುರ್, ಬಾಲಸೋರ್, ಕಠಕ್ ಮತ್ತು ಭುವನೇಶ್ವರ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಭೂಕಂಪನದ ಅನುಭವವಾಗಿದೆ. ಒಡಿಶಾ ರಾಜ್ಯವು ಮಧ್ಯಮ ಭೂಕಂಪನ ಪೀಡಿತ ವಲಯದಲ್ಲಿ ಬರುವ ಕಾರಣ, 5.1 ತೀವ್ರತೆಯ ಭೂಕಂಪವಾದರೂ ಜನರಿಗೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನುಭವಕ್ಕೆ ಬಂದಿಲ್ಲ.ಈ ಭೂಕಂಪನವು ಸುಮಾರು ಒಂದು ನಿಮಿಷದವರೆಗೆ ಇತ್ತು ಎನ್ನಲಾಗಿದೆ.
“ನನ್ನ ಮನೆಯಿರುವುದು ರೂರ್ಕೆಲಾದಲ್ಲಿ. ಬೆಳಗ್ಗೆ 6:12ರ ವೇಳೆಗೆ ನನ್ನ ಕೋಣೆ ಏಕಾಏಕಿ ಅಲುಗಾಡಿದಂಥ ಅನುಭವವಾಯಿತು” ಎಂದು ಒಡಿಶಾ ನಿವಾಸಿಯೊಬ್ಬರು ಟ್ವೀಟ್ ಮಾಡಿದ್ದಾರೆ. “ಕಠಕ್‌ನಲ್ಲೂ ಭೂಕಂಪನದ ಅನುಭವವಾಯಿತು. ನಾನು ಮಲಗಿದ್ದೆ ಮತ್ತು ಹಾಸಿಗೆ ಅಲುಗಾಡಲು ಶುರುವಾದಾಗ ಎಚ್ಚರಗೊಂಡೆ” ಎಂದು ಇನ್ನೊಬ್ಬರು ಹೇಳಿಕೊಂಡಿದ್ದಾರೆ. ನೆರೆಯ ಕೋಲ್ಕತ್ತಾದಲ್ಲೂ ಭೂಕಂಪದ ಅನುಭವವಾಗಿದೆ. ಹಲವರು ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಒಡಿಶಾವು ಭೂಕಂಪನ ವಲಯ 3 ಮತ್ತು 2 ರಲ್ಲಿರುವುದರಿಂದ ಭೂಕಂಪಗಳಿಗೆ ಕಡಿಮೆ ಗುರಿಯಾಗುತ್ತದೆ. ಭುವನೇಶ್ವರ, ಕಠಕ್, ಪುರಿ, ಸಂಬಲ್ಪುರ ಮತ್ತು ಬಾಲಸೋರ್ ಸೇರಿದಂತೆ ಮಹಾನದಿ ಮತ್ತು ಬ್ರಹ್ಮಣಿ ನದಿಯ ಕಣಿವೆಗಳಲ್ಲಿರುವ ಪ್ರದೇಶಗಳು ವಲಯ 3ರಲ್ಲಿ ಬರುತ್ತವೆ.
ಕಳೆದ ವರ್ಷ, ಒಡಿಶಾದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವರು ರಾಜ್ಯದ 14 ಜಿಲ್ಲೆಗಳು ಭೂಕಂಪದ ಅಪಾಯದಲ್ಲಿದೆ ಎಂದು ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದರು.
ಇದೇ ವೇಳೆ, ಪಶ್ಚಿಮ ಬಂಗಾಳದ ಕೋಲ್ಕತ್ತಾ ಭೂಕಂಪನ ವಲಯ 3 ರಲ್ಲಿದ್ದು, ಇದು ಮಧ್ಯಮ ಅಪಾಯದಲ್ಲಿದೆ. ಆದಾಗ್ಯೂ, ನೇಪಾಳ ಅಥವಾ ಈಶಾನ್ಯ ಭಾರತದಲ್ಲಿ ಭೂಕಂಪಗಳಿಂದಾಗಿ ನಗರದಲ್ಲಿ ಸಾಂದರ್ಭಿಕವಾಗಿ ನಡುಕ ಉಂಟಾಗುತ್ತದೆ.
ಜನವರಿ 8 ರಂದು ಟಿಬೆಟ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಆಗಲೂ ಕೋಲ್ಕತ್ತಾದಲ್ಲಿ ಲಘು ಭೂಕಂಪನದ ಅನುಭವವಾಗಿತ್ತು. ಇತ್ತೀಚೆಗೆ ದೆಹಲಿ-ಎನ್‌ಸಿಆರ್ ಪ್ರದೇಶ, ಹಿಮಾಚಲಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು.