ಬೆಳ್ತಂಗಡಿ | ಯಾವುದೇ ಪರವಾನಗಿ ಪಡೆಯದೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಅಕ್ರಮವಾಗಿ ಬ್ಯಾರೆಲ್ ಮತ್ತು ಕ್ಯಾನ್‌ಗಳಲ್ಲಿ ಶೇಖರಿಸಿಟ್ಟಿದ್ದ ಸುಮಾರು 4,175 ಲೀಟರ್ ಡೀಸೆಲ್ ಅನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಣಿಯೂರು ಗ್ರಾಮದ ಮುದಲ್ತಿಯಾರ್ ನಿವಾಸಿ ಜಗದೀಶ್ (35) ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರೋಹಿಣಿ ಸಿ.ಕೆ. ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿರುವ ಜಗದೀಶ್ ಎಂಬಾತನ ಮನೆಯ ಸಮೀಪದ ಶೆಡ್ ಮೇಲೆ ದಾಳಿ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಶೆಡ್‌ನಲ್ಲಿ 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್‌ಗಳು ಹಾಗೂ 35 ಲೀಟರ್ ಸಾಮರ್ಥ್ಯದ 5 ಕ್ಯಾನ್‌ಗಳಲ್ಲಿ ತುಂಬಿಸಿಟ್ಟಿದ್ದ ಒಟ್ಟು 4,175 ಲೀಟರ್ ಡೀಸೆಲ್ ಪತ್ತೆಯಾಗಿದೆ. ಇದರೊಂದಿಗೆ ಸ್ಥಳದಲ್ಲಿದ್ದ ಖಾಲಿ ಬ್ಯಾರೆಲ್, ಕ್ಯಾನ್ ಹಾಗೂ ಇತರೆ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಲಾದ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 3,50,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ಆರೋಪಿ ಜಗದೀಶ್ ಈ ಇಂಧನವನ್ನು ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಪಾಯಕಾರಿ ರೀತಿಯಲ್ಲಿ ಸಂಗ್ರಹಿಸಿಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ರಾಜ್ಯದ ಎಲ್ಲಾ ಕಡೆಯಲ್ಲೂ ಕಂಬಳ ನೆಡೆಸಲು ಅನುಮತಿ – ಪೆಟಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!



















