ಶಿವಮೊಗ್ಗ: ವರದಕ್ಷಿಣೆ ಕಿರುಕುಳ ನೀಡಿ 4 ತಿಂಗಳ ಗರ್ಭಿಣಿ ಸೊಸೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಡಬಟ್ಟೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೊರಬ ಠಾಣೆಯ ಪೊಲೀಸರು ಮೃತಳ ಅತ್ತೆ, ಮಾವ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಡಬಟ್ಟೆ ಗ್ರಾಮದ ನಿವಾಸಿ ನವೀನ್ ಎಂಬುವವರ ಪತ್ನಿ, ಶ್ವೇತಾ (30) ಕೊಲೆಯಾದ ದುರ್ದೈವಿ. ಈಕೆ 4 ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ. ಮಾರ್ಚ್ 30ರಂದು ಪತಿ ನವೀನ್ ಮನೆಯಲ್ಲಿ ಶ್ವೇತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ತೀವ್ರವಾಗಿ ಸುಟ್ಟ ಗಾಯಗೊಂಡಿದ್ದ ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಏಪ್ರಿಲ್ 1ರಂದು ಶ್ವೇತಾ ಕೊನೆಯುಸಿರೆಳೆದಿದ್ದಾರೆ.
ಸ್ಟಾಫ್ ನರ್ಸ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಶ್ವೇತಾ, ಅತ್ತೆ ಮತ್ತು ಮಾವನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಪೋಷಕರು ಗಂಭೀರ ಆರೋಪ ಮಾಡಿದ್ದು, ಘಟನೆ ಸಂಬಂಧ ಸೊರಬ ಠಾಣೆಗೆ ದೂರು ಕೂಡ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶ್ವೇತಾ ಮಾವ ಸಣ್ಣಪ್ಪ, ಅತ್ತೆ ಜಾನಕಿ, ಹೇಮಂತ್, ದಿವ್ಯಾ ಬಂಧಿತ ಆರೋಪಿಗಳಾಗಿದ್ದಾರೆ. ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಶ್ವೇತಾ ಪೋಷಕರು ಆಗ್ರಹಿಸಿದ್ದು ತನಿಖೆ ಮುಂದುವರಿದಿದೆ.
ಇನ್ನು ಮಗಳ ಸಾವಿಗೆ ಶ್ವೇತಾ ಪೋಷಕರು ಮತ್ತು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ನಮ್ಮ ಮಗಳು ಸಾಯುವಂತಹ ಹೇಡಿಯಲ್ಲ. ಮನೆಯ ಜಾಗದ ವಿಚಾರಕ್ಕೆ ಆಕೆಗೆ ಕಿರುಕುಳ ನೀಡುತ್ತಿದ್ದರು. ಹಿರಿಯ ಮಗ ಹೇಮಂತ್ ಮತ್ತು ಸೊಸೆ ದಿವ್ಯಾ ಮೇಲಿನ ಪ್ರೀತಿಗೆ ಹೀಗೆ ಮಾಡಿದ್ದಾರೆ. ಆಕೆಯ ಜೊತೆ ಜಗಳವಾಡಿ ಮನೆಬಿಟ್ಟು ಹೋಗುವಂತೆ ಚಿತ್ರಹಿಂಸೆ ನೀಡಿದ್ದರು. ಈಗ ಅವರೇ ಮಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಶ್ವೇತಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮಗಳ ಶವದ ಮುಂದೆ ಆಕ್ರಂದನ ವ್ಯಕ್ತಪಡಿಸಿರುವ ಪೋಷಕರು ಗರ್ಭಿಣಿ ಮಗಳ ಸಾವಿಗೆ ನ್ಯಾಯಕೊಡಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್ಟೇಬಲ್ ಕಾರು.. ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!



















