ಮುಂಬೈ: ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಪ್ರಯಾಣಿಕರೊಬ್ಬರು ಎಸೆದ ತೆಂಗಿನಕಾಯಿ ತಲೆಗೆ ಬಡಿದು 31 ವರ್ಷದ ಪಾದಚಾರಿಯೊಬ್ಬರು ಮೃತಪಟ್ಟಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಭಾಯಂದರ್ ಕ್ರೀಕ್ ಸೇತುವೆ ಬಳಿ ಶನಿವಾರ ನಡೆದಿದೆ.
ಮೃತರನ್ನು ಸಂಜಯ್ ದತ್ತಾರಾಮ್ ಭೋಯಿರ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಪ್ರತಿಕೂಲ ಹವಾಮಾನದಿಂದಾಗಿ ದೋಣಿ ಸೇವೆ ಸ್ಥಗಿತಗೊಂಡಿದ್ದರಿಂದ, ಭೋಯಿರ್ ಅವರು ಪಂಜು ದ್ವೀಪದಿಂದ ನೈಗಾಂವ್‌ನಲ್ಲಿರುವ ತಮ್ಮ ಕೆಲಸದ ಸ್ಥಳಕ್ಕೆ ತೆರಳಲು ರೈಲ್ವೆ ಸೇತುವೆಯನ್ನು ಪರ್ಯಾಯ ಮಾರ್ಗವಾಗಿ ಬಳಸುತ್ತಿದ್ದರು.
ಈ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲೇ, ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಬಳಿಯಿದ್ದ ‘ನಿರ್ಮಾಲ್ಯ’ (ಪವಿತ್ರ ಪೂಜಾ ಸಾಮಗ್ರಿಗಳು)ವನ್ನು ಹೊರಗಿದ್ದ ಚರಂಡಿಯತ್ತ ಎಸೆದಿದ್ದಾರೆ. ಈ ವೇಳೆ ಅದರಲ್ಲಿದ್ದ ತೆಂಗಿನಕಾಯಿಯು, ನೇರವಾಗಿ ಭೋಯಿರ್ ಅವರ ಕಣ್ಣು ಮತ್ತು ಕಿವಿಯ ನಡುವಿನ ಭಾಗಕ್ಕೆ ಬಲವಾಗಿ ಬಡಿದಿದೆ.
ತೀವ್ರವಾಗಿ ಗಾಯಗೊಂಡ ಭೋಯಿರ್ ಅವರನ್ನು ತಕ್ಷಣವೇ ವಸೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತಲೆಗೆ ಗಂಭೀರ ಗಾಯವಾಗಿದ್ದರಿಂದ ಅವರ ಸ್ಥಿತಿ ಹದಗೆಟ್ಟಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮುಂಬೈನ ಜೆ.ಜೆ. ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದಾಗ್ಯೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತೆಂಗಿನಕಾಯಿ ಎಸೆದ ವ್ಯಕ್ತಿಯನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ.