ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, 31 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. 23ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಬುಧವಾರ ಅರ್ಧಕುಮಾರಿ ಬಳಿ ಯಾತ್ರಾ ಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. ಮಂಗಳವಾರ ಸಂಭವಿಸಿದ್ದ ಮತ್ತೊಂದು ಭೂಕುಸಿತದಲ್ಲಿ 9 ಮಂದಿ ಮೃತಪಟ್ಟು 21 ಮಂದಿ ಗಾಯಗೊಂಡಿದ್ದರು. ತ್ರಿಕೂಟ ಬೆಟ್ಟಕ್ಕೆ ಸಾಗುವ ಮಾರ್ಗವು ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ದಾಖಲೆ ಮಳೆ ಮತ್ತು ಪ್ರವಾಹ:
ಜಮ್ಮುವಿನಲ್ಲಿ ಮಂಗಳವಾರ ಕೇವಲ ಆರು ಗಂಟೆಗಳಲ್ಲಿ (ಬೆಳಗ್ಗೆ 11:30 ರಿಂದ ಸಂಜೆ 5:30) 22 ಸೆಂ.ಮೀ. ದಾಖಲೆಯ ಮಳೆ ಸುರಿದಿದೆ. ಇದರಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ಜಿಲ್ಲೆಯಾದ್ಯಂತ 3,500ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ಝೇಲಂ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ಭಾರೀ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಬಹುತೇಕ ಭಾಗಗಳಲ್ಲಿ ಮೊಬೈಲ್ ಟವರ್‌ಗಳು ಮತ್ತು ವಿದ್ಯುತ್ ಕಂಬಗಳು ಹಾನಿಗೊಳಗಾಗಿ ಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. “ವೈ-ಫೈ ಇಲ್ಲ, ಬ್ರೌಸಿಂಗ್ ಇಲ್ಲ, ಆ್ಯಪ್‌ಗಳು ನಿಧಾನವಾಗಿ ತೆರೆಯುತ್ತಿವೆ” ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರತಿಕೂಲ ಹವಾಮಾನದಿಂದಾಗಿ ಉತ್ತರ ರೈಲ್ವೆಯು ಜಮ್ಮು ಮತ್ತು ಕತ್ರಾ ನಿಲ್ದಾಣಗಳಿಂದ ಹೊರಡುವ 22 ರೈಲುಗಳನ್ನು ರದ್ದುಗೊಳಿಸಿದೆ. 27 ರೈಲುಗಳ ಮಾರ್ಗವನ್ನು ಮೊಟಕುಗೊಳಿಸಲಾಗಿದೆ. ಲೇಹ್ ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹಲವು ವಿಮಾನಗಳ ಹಾರಾಟ ವಿಳಂಬವಾಗಿದ್ದು, ಕೆಲವು ರದ್ದಾಗಿವೆ.
ಶಾಲೆಗಳಿಗೆ ರಜೆ, ಪರೀಕ್ಷೆಗಳು ಮುಂದೂಡಿಕೆ: ಜಮ್ಮು ವಿಭಾಗದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಆಗಸ್ಟ್ 27ರವರೆಗೆ ರಜೆ ಘೋಷಿಸಲಾಗಿದೆ. ಅಲ್ಲದೆ, 10 ಮತ್ತು 11ನೇ ತರಗತಿಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಜಿಲ್ಲಾಡಳಿತ, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಭಾರತೀಯ ಸೇನೆ ಮತ್ತು ಸ್ಥಳೀಯ ಸ್ವಯಂಸೇವಕರನ್ನೊಳಗೊಂಡ ಜಂಟಿ ತಂಡಗಳು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.



















