ಉಧಂಪುರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಬಸಂತ್‌ಗಢ್ ಅರಣ್ಯ ಪ್ರದೇಶದಲ್ಲಿ ಶಂಕಿತ ಉಗ್ರರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿವೆ. ರಾತ್ರಿಯ ವೇಳೆ ಸ್ಥಳೀಯ ಬಕರ್ವಾಲ್ ಕುಟುಂಬವೊಂದರ ಮನೆ ಬಾಗಿಲು ತಟ್ಟಿದ ಮೂವರು ಶಂಕಿತರು, ಊಟ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿ ಭದ್ರತಾ ಪಡೆಗಳಿಗೆ ತಲುಪಿದ ನಂತರ ಈ ಕಾರ್ಯಾಚರಣೆ ಚುರುಕುಗೊಂಡಿದೆ.
ಬಸಂತ್‌ಗಢ್‌ನ ಎತ್ತರದ ಪ್ರದೇಶದಲ್ಲಿರುವ ಚಿಗ್ಲಾ-ಬಲೋತಾ (Chigla-Balotha) ಎಂಬ ಕುಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಮೂವರು ಶಂಕಿತ ಉಗ್ರರು ಬಕರ್ವಾಲ್ ಸಮುದಾಯದ ಕುಟುಂಬವೊಂದರ ಮನೆಗೆ ಬಂದು ಊಟ ನೀಡುವಂತೆ ಕೇಳಿದ್ದಾರೆ. ಇದರಿಂದ ಭಯಭೀತರಾದ ಮನೆ ಮಾಲೀಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ತಕ್ಷಣ ಭಾರತೀಯ ಸೇನೆ (Indian Army), ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ (CRPF) ಯೋಧರನ್ನೊಳಗೊಂಡ ಜಂಟಿ ತಂಡ ಸ್ಥಳಕ್ಕೆ ಧಾವಿಸಿದೆ. ದಟ್ಟ ಅರಣ್ಯ ಮತ್ತು ಕಡಿದಾದ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಡ್ರೋನ್ (Drone) ಮತ್ತು ಶ್ವಾನದಳದ (Sniffer Dogs) ಸಹಾಯದೊಂದಿಗೆ ಶೋಧ ನಡೆಸಲಾಗುತ್ತಿದೆ. ಉಗ್ರರು ಅರಣ್ಯದೊಳಗೆ ಓಡಿ ತಲೆಮರೆಸಿಕೊಂಡಿರುವ ಶಂಕೆಯಿದ್ದು, ಗ್ರಾಮಸ್ಥರಿಗೆ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ.
ನುಸುಳುಕೋರರ ಹಾದಿ
ಬಸಂತ್‌ಗಢ್ ಪ್ರದೇಶವು ಪಾಕಿಸ್ತಾನಿ ಉಗ್ರರು ಕಾಶ್ಮೀರ ಕಣಿವೆಗೆ ನುಸುಳಲು ಬಳಸುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ಗಡಿಯ ಮೂಲಕ ಕಥುವಾ ವಲಯ ಪ್ರವೇಶಿಸುವ ಉಗ್ರರು, ನಂತರ ದೋಡಾ ಮತ್ತು ಕಿಶ್ತ್ವಾರ್ ಮೂಲಕ ಕಾಶ್ಮೀರ ತಲುಪಲು ಈ ಅರಣ್ಯ ಮಾರ್ಗವನ್ನು ಬಳಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲವಾದರೂ, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದ್ದು, ಉಗ್ರರ ಬೇಟೆ ಮುಂದುವರಿದಿದೆ.
ಇದನ್ನೂ ಓದಿ: ದೆಹಲಿ ಬಾಂಬ್ ಸ್ಫೋಟ ಪ್ರಕರಣ : ಪ್ರೀತಿಯ ಬಲೆಯಲ್ಲಿ ಬಿದ್ದು ಭಯೋತ್ಪಾದನೆಗೆ ಜಾರಿದ ವೈದ್ಯರ ಕಥೆ!


















