ಚೆನ್ನೈ : ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ವಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ತಂಡದ ಆಂತರಿಕ ಸಮೀಕರಣಗಳು ಮತ್ತು ಆಟಗಾರರ ಪ್ರಸ್ತುತ ಫಾರ್ಮ್ ಅನ್ನು ಗಮನಿಸಿದರೆ, ಈ ಬಾರಿ ಸಿಎಸ್‌ಕೆಗೆ ಕೆಲವು ಆಟಗಾರರು ಆಸ್ತಿಯಾಗುವ ಬದಲು ‘ಹೊರೆ’ಯಾಗುವ ಸಾಧ್ಯತೆಯಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಕ್ರಿಕೆಟ್ ಅಡಿಕ್ಟರ್ ವರದಿಯ ಪ್ರಕಾರ, ಈ ಪಟ್ಟಿಯಲ್ಲಿ ಹಿರಿಯ ಆಟಗಾರ ಎಂ.ಎಸ್. ಧೋನಿ ಸೇರಿದಂತೆ ಮೂವರು ಪ್ರಮುಖರ ಹೆಸರುಗಳು ಮುಂಚೂಣಿಯಲ್ಲಿವೆ.
ಸಿಎಸ್‌ಕೆ ಅಂದಾಕ್ಷಣ ನೆನಪಾಗುವುದೇ ಮಹೇಂದ್ರ ಸಿಂಗ್ ಧೋನಿ. ಆದರೆ 2026ರ ಸೀಸನ್ ವೇಳೆಗೆ ಧೋನಿಗೆ 44 ವರ್ಷ ತುಂಬಲಿದೆ. ಅವರ ಅನುಭವ ತಂಡಕ್ಕೆ ದೊಡ್ಡ ಬಲವಾದರೂ, ಅವರ ವಯಸ್ಸು ಮತ್ತು ದೈಹಿಕ ಸಾಮರ್ಥ್ಯ ಈಗ ದೊಡ್ಡ ಪ್ರಶ್ನೆಯಾಗಿದೆ. ಈ ಬಾರಿ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರಂತಹ ದಕ್ಷ ವಿಕೆಟ್ ಕೀಪರ್ ಇರುವುದರಿಂದ, ಧೋನಿ ವಿಕೆಟ್ ಹಿಂಭಾಗದಲ್ಲಿ ನಿಲ್ಲುವ ಅನಿವಾರ್ಯತೆ ಕಡಿಮೆಯಿದೆ. ಒಂದು ವೇಳೆ ಅವರನ್ನು ಕೇವಲ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಬಳಸಿಕೊಂಡರೆ, ತಂಡದ ಸಮತೋಲನಕ್ಕೆ ಇದು ಹಿನ್ನಡೆಯಾಗಬಹುದು. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಬೇಕಾದ ಹೊತ್ತಿನಲ್ಲಿ ಧೋನಿ ಅವರ ಉಪಸ್ಥಿತಿ ತಂಡದ ವೇಗಕ್ಕೆ ಅಡ್ಡಿಯಾಗಲಿದೆಯೇ ಎಂಬ ಚರ್ಚೆ ಶುರುವಾಗಿದೆ.
ಅಪಾರ ಮೊತ್ತದ ಒತ್ತಡದಲ್ಲಿ ಯುವ ಆಟಗಾರ ಪ್ರಶಾಂತ್ ವೀರ್
ರವೀಂದ್ರ ಜಡೇಜಾ ಅವರಂತಹ ದಿಗ್ಗಜ ಆಲ್-ರೌಂಡರ್ ಸ್ಥಾನವನ್ನು ತುಂಬಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಉತ್ತರ ಪ್ರದೇಶದ ಯುವ ಆಟಗಾರ ಪ್ರಶಾಂತ್ ವೀರ್ ಅವರನ್ನು ಬರೋಬ್ಬರಿ 14.20 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಆದರೆ, ಜಡೇಜಾ ಅವರ ಅನುಭವ ಮತ್ತು ಮ್ಯಾಚ್-ವಿನ್ನಿಂಗ್ ಸಾಮರ್ಥ್ಯಕ್ಕೆ ಹೋಲಿಸಿದರೆ ಪ್ರಶಾಂತ್ ವೀರ್ ಇನ್ನೂ ಹರಿಬೆಟ್ಟದಂತಿದ್ದಾರೆ. ಇಷ್ಟು ದೊಡ್ಡ ಮೊತ್ತದ ಬೆಲೆ ಮತ್ತು ಜಡೇಜಾ ಅವರ ಜವಾಬ್ದಾರಿಯನ್ನು ಹೊರುವುದು 20 ವರ್ಷದ ಈ ಯುವಕನಿಗೆ ಮಾನಸಿಕ ಒತ್ತಡ ತರಬಹುದು. ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಎಷ್ಟು ಪರಿಣಾಮಕಾರಿ ಎಂಬುದು ಇನ್ನೂ ಸಾಬೀತಾಗಬೇಕಿದೆ.
ಫಾರ್ಮ್ ಕಳೆದುಕೊಂಡ ಅಫ್ಘಾನ್ ಸ್ಪಿನ್ನರ್ ನೂರ್ ಅಹ್ಮದ್
ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದ ಅಫ್ಘಾನಿಸ್ತಾನದ ಸ್ಪಿನ್ನರ್ ನೂರ್ ಅಹ್ಮದ್, ಈ ಬಾರಿ ತಂಡದ ಪಾಲಿಗೆ ದುಬಾರಿಯಾಗುವ ಲಕ್ಷಣಗಳು ಕಾಣುತ್ತಿವೆ. ಗುಜರಾತ್ ಟೈಟಾನ್ಸ್‌ನಿಂದ 10 ಕೋಟಿ ರೂಪಾಯಿಗಳಿಗೆ ಸಿಎಸ್‌ಕೆ ಸೇರಿದ ಈ ಚೈನಾಮನ್ ಬೌಲರ್, ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಬ್ಯಾಟರ್‌ಗಳು ಅವರ ಬೌಲಿಂಗ್ ಶೈಲಿಯನ್ನು ಸುಲಭವಾಗಿ ಓದುತ್ತಿರುವುದು ತಂಡಕ್ಕೆ ಚಿಂತೆಯ ವಿಷಯವಾಗಿದೆ. ಚೆಪಾಕ್ ಮೈದಾನ ಸ್ಪಿನ್ನರ್‌ಗಳಿಗೆ ನೆರವು ನೀಡಿದರೂ, ನೂರ್ ಅವರ ಇತ್ತೀಚಿನ ಕಳಪೆ ಫಾರ್ಮ್ ಸಿಎಸ್‌ಕೆ ಬೌಲಿಂಗ್ ವಿಭಾಗಕ್ಕೆ ಅಸ್ಥಿರತೆ ತರುವ ಭೀತಿಯಿದೆ.
ತಂಡದ ಭವಿಷ್ಯ ಮತ್ತು ಅಭಿಮಾನಿಗಳ ಆತಂಕ
ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ, ಹರಾಜಿನಲ್ಲಿ ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೆಸರಾಗಿದೆ. ಆದರೆ, ಈ ಬಾರಿ ಈ ಮೂವರು ಆಟಗಾರರ ಮೇಲೆ ಮಾಡಿರುವ ಹೂಡಿಕೆ ಮತ್ತು ನಿರೀಕ್ಷೆಗಳು ಉಲ್ಟಾ ಹೊಡೆಯುವ ಸಾಧ್ಯತೆಗಳಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಯುವಕರ ಉತ್ಸಾಹ ಮತ್ತು ಹಿರಿಯರ ಅನುಭವದ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಸಿಎಸ್‌ಕೆ ವಿಫಲವಾದರೆ, 2026ರ ಸೀಸನ್ ಹಳದಿ ಸೈನ್ಯಕ್ಕೆ ಕಠಿಣ ಹಾದಿಯಾಗಲಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಮತ್ತೆ ಕಸದ ಸಮಸ್ಯೆ ಉಲ್ಬಣ..!



















