ಬೆಂಗಳೂರು: ಪ್ರಖ್ಯಾತ ನಟಿಯೊಂದಿಗೆ ಸಂಪರ್ಕದಲ್ಲಿದ್ದ ಖತರ್ನಾಕ್ ಖದೀಮನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ(37)(Panchakshari Swami) ಬಂಧಿತ ಆರೋಪಿ. ಮಡಿವಾಳ ಪೊಲೀಸರು(police) ಈ ಕುಖ್ಯಾತ ಕಳ್ಳನನ್ನು ಬಂಧಿಸಿದ್ದಾರೆ. ಈತನಿಗೆ ಮದುವೆಯಾಗಿದ್ದರೂ ಗರ್ಲ್ ಫ್ರೆಂಡ್ಸ್ ಶೋಕಿ ಇದೆ. ಹೀಗಾಗಿ ಗರ್ಲ್ ಫ್ರೆಂಡ್ ಗಾಗಿ 3 ಕೋಟಿ ರೂ. ಮನೆ ಕಟ್ಟಿಸಿಕೊಟ್ಟಿದ್ದ ಎನ್ನಲಾಗಿದೆ. 2003ರಲ್ಲಿ ಈತ ಅಪ್ರಾಪ್ತನಿದ್ದಾಗಲೇ ಕಳ್ಳತನ ಆರಂಭಿಸಿದ್ದ.
ವಿಚಾರಣೆ ಸಂದರ್ಭದಲ್ಲಿ 180ಕ್ಕೂ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಆರೋಪಿ ಜ. 9ರಂದು ಮಡಿವಾಳದಲ್ಲಿ ಮನೆಕಳ್ಳತನ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಚಿನ್ನಾಭರಣ, ಚಿನ್ನ ಕರಗಿಸಲು ಬಳಸುವ ಫೈರ್ ಗನ್, ಚಿನ್ನದ ಒಡವೆ ಇಟ್ಟು ಕರಗಿಸುವ ಮೂಸ್ ವಶಕ್ಕೆ ಪಡೆದಿದ್ದಾರೆ.
ಖದೀಮ ಪಂಚಾಕ್ಷರಿ ಸ್ವಾಮಿ ತಂದೆ ರೈಲ್ವೆ ಕೆಲಸದಲ್ಲಿದ್ದರು. ತಂದೆಯ ಸಾವಿನ ನಂತರ ತಾಯಿಗೆ ಆ ಕೆಲಸ ಸಿಕ್ಕಿತ್ತು. ಆದರೆ, ಈತ ಮಾತ್ರ ಕಳ್ಳತನದ ಕೆಲಸ ಮಾಡಿಕೊಂಡಿದ್ದ. ಕಳ್ಳತನದಿಂದಲೇ ಕೋಟಿ ಕೋಟಿ ಹಣ ಮಾಡಿದ್ದ.
2014-15 ರಲ್ಲಿ ಪ್ರಖ್ಯಾತ ನಟಿಯೊಬ್ಬರ ಜೊತೆ ಸಂಪರ್ಕದಲ್ಲಿರುವುದಾಗಿಯೂ ಹೇಳಿಕೊಂಡಿದ್ದ. ಆಕೆಗಾಗಿ ಕೋಟಿ ಕೋಟಿ ರೂ. ಹಣ ಖರ್ಚು ಮಾಡಿದ್ದ. 2016ರಲ್ಲಿ ಕೋಲ್ಕತ್ತಾದಲ್ಲಿ ಗರ್ಲ್ ಫ್ರೆಂಡ್ ಗೆ 3 ಕೋಟಿ ರೂ. ಮನೆ ಕಟ್ಟಿಸಿಕೊಟ್ಟಿದ್ದ. ಹುಟ್ಟು ಹಬ್ಬಕ್ಕೆ 22 ಲಕ್ಷ ರೂ. ಮೌಲ್ಯದ ಅಕ್ವೇರಿಯಂ ಗಿಫ್ಟ್ ನೀಡಿದ್ದ. ಆನಂತರ 2016ರಲ್ಲಿ ಗುಜರಾತ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
6 ವರ್ಷ ಗುಜರಾತ್ ಸಬರಮತಿ ಜೈಲಿನಲ್ಲಿದ್ದ ಆರೋಪಿ, ಹೊರ ಬಂದು ಮತ್ತೆ ಕಳ್ಳತನದ ಹಾದಿ ಹಿಡಿದಿದ್ದ. ಆನಂತರ ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಅಲ್ಲಿ ಕೂಡ ಜೈಲುವಾಸ ಅನುಭವಿಸಿ, ಹೊರ ಬಂದಿದ್ದ. ಅಲ್ಲಿಂದ ಹೊರ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಕಳ್ಳತನ ಆರಂಭಿಸಿ ಸಿಕ್ಕಿಬಿದ್ದಿದ್ದಾನೆ.
ಗರ್ಲ್ ಫ್ರೆಂಡ್ ಗೆ ಕೋಟಿ ಕೋಟಿ ರೂ. ಮೌಲ್ಯದ ಮನೆ ಗಿಫ್ಟ್ ಮಾಡಿದ ಈತ ಮಾತ್ರ ಇರುವುದು 400 ಸ್ಕ್ವೇರ್ ಫೀಟ್ ನಲ್ಲಿರುವ ಮನೆಯಲ್ಲಿ. ಅದು ಕೂಡ ತಾಯಿಯ ಹೆಸರಿನಲ್ಲಿದೆ. ಬ್ಯಾಂಕ್ ಲೋನ್ ಕಟ್ಟದಿರುವುದರಿಂದ ಆ ಮನೆಗೂ ಹರಾಜು ನೋಟಿಸ್ ಬಂದಿದೆ. ಮದುವೆಯಾಗಿ ಮಗು ಇದ್ದರೂ ಪ್ರಿಯತಮೆಗಾಗಿ ಮನೆ ಕಟ್ಟಿಸಿದ್ದ. ಬೀಗ ಹಾಕಿದ ಮನೆಯನ್ನೇ ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ.
ಕಳ್ಳತನ ಮಾಡಿದ ನಂತರ ರಸ್ತೆಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್(Black Belt in Karate) ಪಡೆದಿರುವ ಪಂಚಾಕ್ಷರಿ ಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.