ಹೈದರಾಬಾದ್: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ, ಕೊಲೆಗಳ ಸರಣಿ ಮುಂದುವರಿದಿದೆ. ತೆಲಂಗಾಣ(Telangana) ಮೂಲದ ವಿದ್ಯಾರ್ಥಿಯೊಬ್ಬನನ್ನು ಅಮೆರಿಕದ ಮಿಲ್ವಾಕಿಯಲ್ಲಿ ದರೋಡೆಕೋರರ ಗ್ಯಾಂಗ್‌ವೊಂದು ಗುಂಡಿಕ್ಕಿ ಕೊಂದಿದೆ.
27 ವರ್ಷದ ಗಂಪಾ ಪ್ರವೀಣ್(Gampa Praveen) ಹತ್ಯೆಯಾದ ವಿದ್ಯಾರ್ಥಿ. ಆತ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದು ಮಾಸ್ಟರ್ ಆಫ್ ಸೈನ್ಸ್ (ಎಂಎಸ್) ವ್ಯಾಸಂಗ ಮಾಡುತ್ತಿದ್ದ. ಅಧ್ಯಯನದ ಜೊತೆಗೆ ಆತ ಅಂಗಡಿಯೊಂದರಲ್ಲಿ ಪಾರ್ಟ್ಟೈಮ್ ಕೆಲಸ ಮಾಡುತ್ತಿದ್ದ. ಈ ಸ್ಥಳಕ್ಕೆ ಬುಧವಾರ ಮುಂಜಾನೆ ನುಗ್ಗಿದ ದರೋಡೆಕೋರರ ಗುಂಪು, ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಗಂಪಾ ಪ್ರವೀಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪ್ರವೀಣ್ ತೆಲಂಗಾಣ (Telangana)ದ ರಂಗಾ ರೆಡ್ಡಿ ಜಿಲ್ಲೆಯ ಕೇಶಂಪೇಟ್ ನಿವಾಸಿ. ”ಬೆಳಗ್ಗೆ 5 ಗಂಟೆಗೆ ತನ್ನ ಮಗನಿಂದ ವಾಟ್ಸ್ ಆಪ್(Whatsapp) ಕರೆ ಬಂದಿತ್ತು. ಆದರೆ, ಅದಕ್ಕೆ ಉತ್ತರಿಸಲು ಸಾಧ್ಯವಾಗಿರಲಿಲ್ಲ,” ಎಂದು ಆತನ ತಂದೆ ಹೈದರಾಬಾದ್‌ನ ರಾಘವುಲು ಘಟನೆ ಕುರಿತು ವಿವರಿಸುತ್ತಾ ಕಣ್ಣೀರು ಹಾಕಿದ್ದಾರೆ. “ಬೆಳಿಗ್ಗೆ, ನಾನು ಮಿಸ್ಡ್ ಕಾಲ್ ನೋಡಿದೆ. ತಕ್ಷಣ ಅವನಿಗೆ ಧ್ವನಿ ಸಂದೇಶ (ವಾಯ್ಸ್ ಮೆಸೇಜ್) ಕಳುಹಿಸಿದೆ. ಆದರೆ, ಒಂದು ಗಂಟೆ ಕಳೆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ನಾನು ಅವನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದೆ. ಆದರೆ ಬೇರೊಬ್ಬರು ಕರೆ ಸ್ವೀಕರಿಸಿದರು. ಅನುಮಾನ ಬಂದು ಏನಾದರೂ ಸಂಭವಿಸಿದೆಯೇ ಎಂದು ಫೋನ್ ಕಟ್ ಮಾಡಿದೆ” ಎಂದಿದ್ದಾರೆ.
”ಬಳಿಕ ನಾನು ಅವನ ಸ್ನೇಹಿತರನ್ನು ಸಂಪರ್ಕಿಸಿ, ಮಗನ ಬಗ್ಗೆ ವಿಚಾರಿಸಿದೆ. ಆಗ ಅವರು, ಅಲ್ಲಿ ನಡೆದ ಘಟನೆಯ ಬಗ್ಗೆ ವಿವರಿಸಿದರು. ಪ್ರವೀಣ್ ಕೆಲಸಕ್ಕೆ ಅಂಗಡಿಗೆ ಹೋಗಿದ್ದಾಗ ದರೋಡೆಕೋರರು ಬಂದು ಗುಂಡು ಹಾರಿಸಿದ್ದು, ಗುಂಡು ತಗುಲಿ ಮೃತಪಟ್ಟಿರುವುದಾಗಿ ತಿಳಿಸಿದರು” ಎಂದು ರಾಘವುಲು ಹೇಳಿದ್ದಾರೆ.
ಇದಾದ ಬಳಿಕ ಷಿಕಾಗೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು(The Consulate General of India) ಪ್ರವೀಣ್ ಅವರ ಕುಟುಂಬವನ್ನು ಸಂಪರ್ಕಿಸಿದ್ದು, ಮೃತದೇಹವನ್ನು ಭಾರತಕ್ಕೆ ರವಾನಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ನೆರವು ನೀಡುವ ಭರವಸೆ ಕೊಟ್ಟಿದೆ.
ಇದನ್ನೂ ಓದಿ: Language row: ಮುಂಬೈನಲ್ಲಿ ವಾಸಿಸಲು ಮರಾಠಿ ಗೊತ್ತಿರಬೇಕಾಗಿಲ್ಲ: ಆರ್‌ಎಸ್‌ಎಸ್ ನಾಯಕ ವಿವಾದ
“ವಿಸ್ಕಾನ್ಸಿನ್-ಮಿಲ್ವಾಕಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಪ್ರವೀಣ್ ಕುಮಾರ್ ಗಂಪಾ ಅವರ ಅಕಾಲಿಕ ನಿಧನದಿಂದ ನಾವು ದುಃಖಿತರಾಗಿದ್ದೇವೆ. ಭಾರತೀಯ ರಾಯಭಾರ ಕಚೇರಿಯು ಪ್ರವೀಣ್ ಅವರ ಕುಟುಂಬ ಮತ್ತು ವಿಶ್ವವಿದ್ಯಾಲಯದೊಂದಿಗೆ ಸಂಪರ್ಕದಲ್ಲಿದೆ” ಎಂದು ರಾಯಭಾರ ಕಚೇರಿಯೂ ಟ್ವೀಟ್ ಮಾಡಿದೆ.