ಭೋಪಾಲ್: ಅರಿವಳಿಕೆ (Anaesthesia) ಮದ್ದು ಅತಿಯಾಗಿ ತೆಗೆದುಕೊಂಡ ಪರಿಣಾಮ ಕಳೆದ 24 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಭೋಪಾಲ್ ಏಮ್ಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ. ರಶ್ಮಿ ವರ್ಮಾ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ವೈದ್ಯಕೀಯ ಲೋಕದಲ್ಲಿ ತೀವ್ರ ಆಘಾತ ಮೂಡಿಸಿದ್ದು, ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏಮ್ಸ್ ಭೋಪಾಲ್‌ನ ತುರ್ತು ಮತ್ತು ಟ್ರಮಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ರಶ್ಮಿ ಅವರು, ಡಿಸೆಂಬರ್ 11ರಂದು ಕರ್ತವ್ಯ ಮುಗಿಸಿ ಮನೆಗೆ ಮರಳಿದ ನಂತರ ಅರಿವಳಿಕೆ ಚುಚ್ಚುಮದ್ದಿನ ಅಧಿಕ ಡೋಸ್ ಅನ್ನು ತಾವೇ ಚುಚ್ಚಿಕೊಂಡಿದ್ದರು ಎಂದು ಹೇಳಲಾಗಿದೆ. ಕೂಡಲೇ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಪತಿ ಡಾ. ಮನ್ಮೋಹನ್ ಶಾಕ್ಯ ಅವರು ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸುಮಾರು 25 ನಿಮಿಷ ಕಳೆದಿತ್ತು ಮತ್ತು ಅಷ್ಟೊತ್ತಿಗಾಗಲೇ ಅವರ ಹೃದಯ ಬರೋಬ್ಬರಿ ಏಳು ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು.
ವೈದ್ಯರು ಸಿಪಿಆರ್ (CPR) ಚಿಕಿತ್ಸೆ ನೀಡಿ ಹೃದಯಬಡಿತವನ್ನು ಮರಳಿ ತರುವಲ್ಲಿ ಯಶಸ್ವಿಯಾದರೂ, ಆಮ್ಲಜನಕದ ಕೊರತೆಯಿಂದಾಗಿ ಅವರ ಮೆದುಳಿಗೆ ತೀವ್ರ ಹಾನಿಯಾಗಿತ್ತು. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಗ್ಲೋಬಲ್ ಹೈಪೋಕ್ಸಿಕ್ ಬ್ರೈನ್ ಇಂಜುರಿ’ ಎಂದು ಕರೆಯಲಾಗುತ್ತದೆ. ಕಳೆದ 24 ದಿನಗಳಿಂದ ಅವರು ವೆಂಟಿಲೇಟರ್ ಬೆಂಬಲದಲ್ಲೇ ಇದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜನವರಿ 5ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಡೆತ್ ನೋಟ್‌ನಲ್ಲಿ ಏನಿದೆ?
ಘಟನಾ ಸ್ಥಳದಲ್ಲಿ ಪೊಲೀಸರಿಗೆ ಡಾ. ರಶ್ಮಿ ಬರೆದಿರುವ ಡೆತ್ ನೋಟ್ ದೊರೆತಿದೆ. ಅದರಲ್ಲಿ, “ನನ್ನ ಸಾವಿಗೆ ನಾನೇ ಹೊಣೆ. ನನ್ನ ಸಾವಿನ ನಂತರ ಯಾರನ್ನೂ ದೂಷಿಸಬೇಡಿ ಅಥವಾ ಯಾರಿಗೂ ತೊಂದರೆ ಕೊಡಬೇಡಿ,” ಎಂದು ಬರೆಯಲಾಗಿದೆ. ಈ ಪತ್ರವನ್ನು ಪೊಲೀಸರು ಕೈಬರಹ ತಜ್ಞರ ಪರಿಶೀಲನೆಗೆ ಕಳುಹಿಸಿದ್ದಾರೆ. ಎಸಿಪಿ ಅದಿತಿ ಭಾವಸರ್ ಈ ಕುರಿತು ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹೆಚ್ಚಿನ ಸ್ಪಷ್ಟತೆ ಸಿಗಲಿದೆ ಎಂದಿದ್ದಾರೆ.
ಖಿನ್ನತೆಯೇ ಕಾರಣವಾಯಿತೇ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಡಾ. ರಶ್ಮಿ ಅವರು ತಮ್ಮ ತಂದೆಯ ನಿಧನದ ನಂತರ ತೀವ್ರವಾದ ಮಾನಸಿಕ ಆಘಾತ ಮತ್ತು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಕೆಲಸದ ಸ್ಥಳದಲ್ಲಿನ ಯಾವುದೇ ಸಮಸ್ಯೆಗಳ ಬಗ್ಗೆ ಅವರು ದೂರು ನೀಡಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದಾಗ್ಯೂ, ಏಮ್ಸ್ ಆಸ್ಪತ್ರೆಯಲ್ಲಿನ ವಿಷಕಾರಿ ಕೆಲಸದ ವಾತಾವರಣದ (Toxic Work Culture) ಬಗ್ಗೆ ಕೆಲವು ವಲಯಗಳಲ್ಲಿ ಗುಸುಗುಸು ಕೇಳಿಬಂದಿತ್ತು. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಇದನ್ನು ನಿರಾಕರಿಸಿದ್ದು, ರಶ್ಮಿ ಅವರು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು ಮತ್ತು ಯಾವುದೇ ಒತ್ತಡದ ಬಗ್ಗೆ ಅಧಿಕೃತವಾಗಿ ದೂರು ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.
ಡಾ. ರಶ್ಮಿ ಅವರು ಬಡ ರೋಗಿಗಳ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಸಿಪಿಆರ್ ತರಬೇತಿ ಕಾರ್ಯಕ್ರಮಗಳ ನೋಡಲ್ ಅಧಿಕಾರಿಯಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದರು. ಅವರ ಅಗಲಿಕೆ ವೈದ್ಯಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಇದನ್ನೂ ಓದಿ; ದೆಹಲಿಯಲ್ಲಿ ಒತ್ತುವರಿ ತೆರವು ವೇಳೆ ಹೈಡ್ರಾಮಾ | ಪೊಲೀಸರ ಮೇಲೆ ಕಲ್ಲು ತೂರಾಟ, ಅಶ್ರುವಾಯು ಸಿಡಿತ ; 5 ಮಂದಿ ವಶಕ್ಕೆ



















