ಡೆಹ್ರಾಡೂನ್: ಜಗತ್ತಿನ ಅತೀ ದೊಡ್ಡ ಕ್ರೀಡಾಕೂಟವಾಗಿರುವ 2036ರ ಒಲಿಂಪಿಕ್ಸ್ ಭಾರತದಲ್ಲಿ ನಡೆಯಲಿದೆ. ಅದರ ಬಿಡ್ ಪಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಪ್ರಧಾನಿ ಎಂದು ಪ್ರಧಾನಿ ನರೇಂದ್ರ ಮೋದಿ(PM Modi) ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಮಂಗಳವಾರ ಡೆಹ್ರಾಡೂನ್‌ನಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ, 2036ರ ಒಲಿಂಪಿಕ್ಸ್ ಆತಿಥ್ಯವು ಭಾರತಕ್ಕೆ ದೊರೆತರೆ ಅದು ಭಾರತೀಯ ಕ್ರೀಡೆಗಳನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಿಂಚಲಿದೆ. ಭಾರತೀಯ ಪ್ರತಿಭೆಗಳಿಗೆ ಹೊಸ ಅವಕಾಶ ಸಿಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
‘2036ರ ಒಲಿಂಪಿಕ್ ಕ್ರೀಡಾಕೂಟವನ್ನು ಭಾರತದಲ್ಲಿ ಏರ್ಪಡಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಒಲಿಂಪಿಕ್ಸ್ ಕ್ರೀಡಾಕೂಟ ನಡೆದಾಗಲೆಲ್ಲ ಎಲ್ಲಾ ಕ್ಷೇತ್ರಗಳು ಅದರ ಲಾಭ ಪಡೆಯುತ್ತವೆ. ದೇಶದ ಅಭಿವೃದ್ಧಿಯಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದಾಗಿ ನಾನು ಭಾವಿಸಿದ್ದೇನೆ’ ಎಂದು ಮೋದಿ ಹೇಳಿದರು.
ಭಾರತದಿಂದ ಉಮೇದುವಾರಿಕೆ
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ 2024 ರ ಅಕ್ಟೋಬರ್ 1 ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಔಪಚಾರಿಕವಾಗಿ ಉದ್ದೇಶದ ಪತ್ರವನ್ನ ಕಳುಹಿಸಿದೆ ಎನ್ನಲಾಗಿದೆ. ಭಾರತವು 2036 ರಲ್ಲಿ ಒಲಿಂಪಿಕ್ ಕ್ರೀಡಾಕೂಟ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಬಯಸಿದೆ ಎಂದು ಈ ಪತ್ರದಲ್ಲಿ ಬರೆಯಲಾಗಿದೆ.
2036ರ ಒಲಿಂಪಿಕ್ಸ್ ಆಯೋಜನೆಗೆ ಭಾರತ ಕಳೆದ ಒಂದು ವರ್ಷದಿಂದ ಉತ್ಸುಕತೆ ತೋರುತ್ತಿದ್ದು, ಆತಿಥೇಯ ದೇಶದ ಆಯ್ಕೆ ಈ ವರ್ಷ ನಡೆಯಲಿದೆ. ಭಾರತದೊಂದಿಗೆ ಸೌದಿ ಅರೇಬಿಯಾ ಮತ್ತು ಟರ್ಕಿ ಕೂಡ ಬಿಡ್ ಸಲ್ಲಿಸಲು ಉತ್ಸುಕವಾಗಿವೆ. ಭಾರತದಲ್ಲಿ ಒಲಿಂಪಿಕ್ಸ್ ಆಯೋಜನೆಯಾದರೆ ಅಹ್ಮದಾಬಾದ್ ಪ್ರಮುಖ ನಗರವಾಗಲಿದೆ.