ಬೆಂಗಳೂರು ; ಭಾರತದಲ್ಲಿ ಒಲಿಂಪಿಕ್ಸ್ ನಡೆಸಬೇಕು ಎಂಬುದು ಭಾರತೀಯರೆಲ್ಲ ಆಸೆ. ಕೇಂದ್ರ ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಶತ ಪ್ರಯತ್ನಗಳನ್ನು ನಡೆಸುತ್ತಿದೆ. 2036ರ ಒಲಿಂಪಿಕ್ಸ್ (Olympics in 2036) ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಹೇಳಿದ್ದರು. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಕೂಡ ಭಾರತ ಒಲಿಂಪಿಕ್ಸ್ ಯೋಜಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಶುಕ್ರವಾರ 38ನೇ ರಾಷ್ಟ್ರೀಯ ಗೇಮ್ಸ್‌ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ‘ಭಾರತದಲ್ಲಿನಡೆಯುವ ಒಲಿಂಪಿಕ್ಸ್ನಲ್ಲಿ ನಮ್ಮ ಅಥ್ಲೀಟ್‌ಗಳು ಪದಕ ಗೆದ್ದು, ತ್ರಿವರ್ಣ ಧ್ವಜ ಹಾರಿಸಲಿದ್ದಾರೆ’ ಎಂದಿದ್ದಾರೆ. ಈ ಮೂಲಕ ಭಾರತದಲ್ಲಿ ಒಲಿಂಪಿಕ್ ನಡೆಯುವುದು ಖಚಿತ ಎನ್ನುವ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಆಸಕ್ತಿ ತೋರಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಗೆ ಮನವಿ ಸಲ್ಲಿಸಿದೆ. ಮೋದಿ 2014ರಲ್ಲಿ ಪ್ರಧಾನಿ ಆದಾಗ ನಮ್ಮ ಕ್ರೀಡಾ ಬಜೆಟ್ ₹800 ಕೋಟಿ ಇತ್ತು. ಈಗ ₹3800 ಕೋಟಿಗೆ ಏರಿಕೆಯಾಗಿದೆ. 2014ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 15 ಪದಕ ಲಭಿಸಿತ್ತು. ಈಗ ಅದು 26 ಆಗಿದೆ. 2014ರ ಏಷ್ಯನ್ ಗೇಮ್ಸ್‌ನಲ್ಲಿ 57 ಪದಕ ಗೆದ್ದಿದ್ದರೆ, 2023ರಲ್ಲಿ 107 ಆಗಿದೆ’ ಎಂದು ಅಮಿತ್ ಶಾ ಭಾರತದ ಕ್ರೀಡಾ ಸಾಧನೆಗಳನ್ನ ಹೊಗಳಿದರು.
2036ರ ಒಲಿಂಪಿಕ್ಸ್ ಆಯೋಜನೆಗೆ ಭಾರತ ಕಳೆದ ಒಂದು ವರ್ಷದಿಂದ ಉತ್ಸುಕತೆ ತೋರುತ್ತಿದ್ದು, ಆತಿಥೇಯ ದೇಶದ ಆಯ್ಕೆ ಈ ವರ್ಷ ನಡೆಯಲಿದೆ. ಭಾರತದೊಂದಿಗೆ ಸೌದಿ ಅರೇಬಿಯಾ ಮತ್ತು ಟರ್ಕಿ ಕೂಡ ಬಿಡ್ ಸಲ್ಲಿಸಿದೆ.
ಫ್ರಾನ್ಸ್ ಬೆಂಬಲ
ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಕೂಡ 2036 ಒಲಿಂಪಿಕ್ಸ್ ಕ್ರೀಡಾಕೂಟವನ್ನು ಭಾರತ ಆಯೋಜಿಸಬಲ್ಲದು ಎಂದು ಹೇಳಿದ್ದರು. ಭಾರತದ ಭವಿಷ್ಯದ ಬಗ್ಗೆ ನನಗೆ ಬಲವಾದ ನಂಬಿಕೆಯಿದೆ. ಒಲಿಂಪಿಕ್ಸ್‌ನಂಥ ಜಾಗತಿಕ ಕ್ರೀಡಾಕೂಟವನ್ನು ಆಯೋಜಿಸುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಹೇಳಿದ್ದರು.
ದೇಶವು ಒಲಿಂಪಿಕ್ಸ್ ಕ್ರೀಡಾ ಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. 2036ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಭಾರತದ ನೆಲದಲ್ಲಿ ನಡೆಯಬೇಕು ಎಂಬುದು ಭಾರತೀಯರ ಕನಸಾಗಿದೆ ಎಂದು ಹೇಳಿದ್ದರು.