ಕೋಲಾರ: 2016 ರಲ್ಲಿ ಆಸ್ತಿ ಲಪಟಾಯಿಸಲು ವ್ಯಕ್ತಿವೊರ್ವನನ್ನು ಸುಟ್ಟು ಕೊಂದು ಹಾಕಿರುವ ಪ್ರಕರಣದಲ್ಲಿ 4 ಜನ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಆಂದ್ರದ ಪುಂಗನೂರು ನಿವಾಸಿ ಅಗಸ್ತ್ಯ ರೆಡ್ಡಿಯನ್ನು(80) ಅಪಹರಿಸಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಾರಂಗಿ ಅರಣ್ಯ ಪ್ರದೇಶದಲ್ಲಿ ನಡೆದಿತ್ತು.
ಕೋಲಾರ ಜಿಲ್ಲಾ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನಿಂದ ತೀರ್ಪು ಪ್ರಕಟವಾಗಿದೆ.
ಮೃತ ಅಗಸ್ತ್ಯ ರೆಡ್ಡಿಯಿಂದ 30 ಲಕ್ಷ ರೂ. ಸಾಲ ಪಡೆದುಕೊಂಡಿದ್ದ ಆರೋಪಿಗಳು ಸಾಲ ವಾಪಾಸ್ ಕೇಳಿದ್ದಕ್ಕೆ, ಅಗಸ್ತ್ಯ ರೆಡ್ಡಿಗೆ ಸೇರಿದ ಬೆಂಗಳೂರಿನ ಕೆಆರ್ ಪುರಂದಲ್ಲಿರುವ ಕೋಟಿಗಟ್ಟಲೆ ಬೆಲೆ ಬಾಳುವ ನಿವೇಶನವನ್ನು ಕಬಳಿಸಲು ಯತ್ನಿಸಿದ್ದರು.
ನಾಲ್ವರಿಗೆ ಅಗಸ್ತ್ಯ ರೆಡ್ಡಿ ನಿವೇಶನ ಮಾರಾಟ ಮಾಡಿದ್ದಂತೆ ನಕಲಿ ದಾಖಲೆ ಸೃಷ್ಟಿಸಿದ್ದರು. ಈ ಸಂಬಂಧ ಅಗಸ್ತ್ರ ರೆಡ್ಡಿ ಕೆ.ಆರ್. ಪುರಂ ಪೊಲೀಸರಿಗೆ ರಜನಿಕಾಂತ್, ಕೃಷ್ಣಾರೆಡ್ಡಿ, ಸುಬ್ರಮಣ್ಯಂ, ಜ್ಯೋತಿಶ್ವರ್ ಎಂಬುವರ ವಿರುದ್ದ ದೂರು ನೀಡಿದ್ದರು. ಈ ಹಿನ್ನಲೆ ಕಾರಿನಲ್ಲಿ ಅಗಸ್ತ್ಯ ರೆಡ್ಡಿಯನ್ನು ಅಪಹರಿಸಿ, ಪೆಟ್ರೋಲ್ ಸುರಿದು ಕೊಂದಿದ್ದರು.
ಈ ಸಂಬಂಧ ಪತ್ನಿ ಲಕ್ಷ್ಮಿದೇವಮ್ಮ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು .ಆ ಬಳಿಕ ಕೋರ್ಟ್ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ಹಾಗೂ ತಲಾ 25 ಸಾವಿರ ದಂಡ ವಿಧಿಸಿ ಮೃತನ ಪತ್ನಿ ಲಕ್ಷ್ಮಿದೇವಮ್ಮ ಅವರಿಗೆ ನೀಡಲು ಆದೇಶ ನೀಡಿತ್ತು. ಸರ್ಕಾರದ ಪರವಾಗಿ ವಿ.ಎಸ್. ರಮೇಶ್ ವಾದ ಮಂಡಿಸಿದ್ದರು.