ಭೋಪಾಲ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಸ್ವಾತಂತ್ರ್ಯ ದಿನಾಚರಣೆಯಂದು ತನಗೆ ಎರಡು ಲಡ್ಡುಗಳ ಬದಲು ಕೇವಲ ಒಂದೇ ಒಂದು ಲಡ್ಡು ನೀಡಿದ್ದಕ್ಕೆ ಬೇಸರಗೊಂಡ ವ್ಯಕ್ತಿಯೊಬ್ಬರು ನೇರವಾಗಿ ಮುಖ್ಯಮಂತ್ರಿಗಳ ಸಹಾಯವಾಣಿಗೆ (CM Helpline) ದೂರು ನೀಡಿರುವುದ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಭಿಂಡ್ ಜಿಲ್ಲೆಯ ಗ್ರಾಮ ಪಂಚಾಯಿತಿ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಂತರ ನೆರೆದಿದ್ದ ಎಲ್ಲರಿಗೂ ಲಡ್ಡುಗಳನ್ನು ಹಂಚಲಾಗುತ್ತಿತ್ತು. ಈ ವೇಳೆ, ಕಮಲೇಶ್ ಖುಷ್ವಾಹ ಎಂಬ ಗ್ರಾಮಸ್ಥನ ಸರದಿ ಬಂದಾಗ, ಆಯೋಜಕರು ಆತನಿಗೆ ಒಂದು ಲಡ್ಡು ಮಾತ್ರ ನೀಡಿದ್ದಾರೆ.
ಇದರಿಂದ ಅಸಮಾಧಾನಗೊಂಡ ಕಮಲೇಶ್, ತಮಗೂ ಎರಡು ಲಡ್ಡು ನೀಡಬೇಕೆಂದು ಪಟ್ಟುಹಿಡಿದಿದ್ದಾರೆ. ಆದರೆ, ಅವರ ಬೇಡಿಕೆಗೆ ಯಾರೂ ಕ್ಯಾರೇ ಎಂದಿಲ್ಲ. ಇದರಿಂದ ಸಿಟ್ಟಿಗೆದ್ದ ಅವರು, ಪಂಚಾಯಿತಿ ಕಟ್ಟಡದ ಹೊರಗಿನಿಂದಲೇ ಮುಖ್ಯಮಂತ್ರಿಗಳ ಸಹಾಯವಾಣಿಗೆ ಕರೆ ಮಾಡಿ ತಮ್ಮ ಅಸಮಾಧಾನವನ್ನು ದೂರಾಗಿ ದಾಖಲಿಸಿದ್ದಾರೆ. “ಧ್ವಜಾರೋಹಣದ ನಂತರ ಪಂಚಾಯಿತಿಯು ಸಿಹಿ ವಿತರಣೆಯನ್ನು ಸರಿಯಾಗಿ ಮಾಡಿಲ್ಲ, ಸಮಾನತೆ ಕಾಪಾಡದೇ ತಾರತಮ್ಯ ಎಸಗಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆಯನ್ನು ಪಂಚಾಯಿತಿ ಕಾರ್ಯದರ್ಶಿ ರವೀಂದ್ರ ಶ್ರೀವಾಸ್ತವ ಅವರು ಖಚಿತಪಡಿಸಿದ್ದಾರೆ. “ಆ ಗ್ರಾಮಸ್ಥ ಹೊರಗೆ ರಸ್ತೆಯಲ್ಲಿ ನಿಂತಿದ್ದ. ನಮ್ಮ ಸಿಬ್ಬಂದಿ ಅವನಿಗೆ ಒಂದು ಲಡ್ಡು ಕೊಟ್ಟ, ಆದರೆ ಅವನು 2 ಲಡ್ಡು ಕೊಡುವಂತೆ ಪಟ್ಟು ಹಿಡಿದ. ನಿರಾಕರಿಸಿದಾಗ, ಸಿಎಂ ಸಹಾಯವಾಣಿಗೆ ಮಾಡಿದ್ದಾನೆ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿವಾದ ಶಮನಕ್ಕೆ ಪಂಚಾಯಿತಿಯ ಸರ್ಕಸ್
ಈ ಸಣ್ಣ ವಿಷಯವು ಸಿಎಂ ಸಹಾಯವಾಣಿ ತಲುಪಿದ್ದರಿಂದ, ಪರಿಸ್ಥಿತಿ ತಿಳಿಗೊಳಿಸಲು ಪಂಚಾಯಿತಿ ಮುಂದಾಗಿದೆ. ದೂರುದಾರನನ್ನು ಸಮಾಧಾನಪಡಿಸಲು ಮಾರುಕಟ್ಟೆಯಿಂದ ಒಂದು ಕಿಲೋಗ್ರಾಂ ಸಿಹಿ ಖರೀದಿಸಿ, ಆತನಿಗೆ ನೀಡಿ ಕ್ಷಮೆಯಾಚಿಸಲು ಪಂಚಾಯಿತಿ ನಿರ್ಧರಿಸಿದೆ.
ಹಿಂದೆಯೂ ದಾಖಲಾಗಿತ್ತು ವಿಚಿತ್ರ ದೂರು
ಇದೇ ಜಿಲ್ಲೆಯಲ್ಲಿ 2020ರ ಜನವರಿಯಲ್ಲಿ, ಗ್ರಾಮಸ್ಥನೊಬ್ಬ ಕೆಟ್ಟುಹೋಗಿರುವ ಕೈಪಂಪ್ ಬಗ್ಗೆ ಸಿಎಂ ಸಹಾಯವಾಣಿಗೆ ದೂರು ನೀಡಿದ್ದ. ಆಗ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ (PHE) ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಆರ್. ಗೋಯಲ್ ಅವರು ದೂರಿಗೆ ನೀಡಿದ ಉತ್ತರ ಭಾರೀ ವಿವಾದ ಸೃಷ್ಟಿಸಿತ್ತು. “ದೂರುದಾರನಿಗೆ ಹುಚ್ಚು, ಅವನಿಗೆ ಅಪಸ್ಮಾರದ ಕಾಯಿಲೆ ಇದೆ. ಅವನ ಇಡೀ ಕುಟುಂಬಕ್ಕೆ ಅಪಸ್ಮಾರವಿದೆ. ಕೈಪಂಪ್ ಕೆಟ್ಟಿಲ್ಲ, ಅವನ ಮನಸ್ಸು ಕೆಟ್ಟಿದೆ. ನಮ್ಮ ಮೆಕ್ಯಾನಿಕ್‌ನ ಬಟ್ಟೆಯನ್ನೇ ಹರಿದು ಹಾಕಿದ್ದಾನೆ. ದೂರುದಾರನ ಎದೆಗೆ ಕೈಪಂಪ್ ಕಿತ್ತು ಹೂಳಬೇಕು,” ಎಂದು ಅವರು ಬರೆದಿದ್ದರು.
ಅಧಿಕಾರಿಯ ಈ ಹೇಳಿಕೆಗಳು ಭಾರೀ ಆಕ್ರೋಶಕ್ಕೆ ಕಾರಣವಾದ ನಂತರ, ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ನಂತರ ಅವರು, ತಮ್ಮ ಐಡಿಯನ್ನು ಯಾರೋ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.



















