ತವಾಂಗ್ : ಅರುಣಾಚಲ ಪ್ರದೇಶಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಕೇರಳದ ಏಳು ಮಂದಿ ಪ್ರವಾಸಿಗರ ತಂಡವೊಂದು ಇಲ್ಲಿನ ತವಾಂಗ್ ಜಿಲ್ಲೆಯಲ್ಲಿ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಹೆಪ್ಪುಗಟ್ಟಿದ ಸೇಲಾ ಸರೋವರದಲ್ಲಿ ಮುಳುಗಿ ಕೇರಳದ ಇಬ್ಬರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಕೇರಳದ ಕೊಲ್ಲಂ ಮೂಲದ ದಿನು (26) ಎಂದು ಗುರುತಿಸಲಾಗಿದ್ದು, ಅವರ ಜೊತೆಯಲ್ಲಿದ್ದ ಮಹದೇವ್ (24) ಎಂಬವರು ನಾಪತ್ತೆಯಾಗಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕ್ಷಣಾರ್ಧದಲ್ಲಿ ಸಂಭವಿಸಿದ ಈ ದುರಂತ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಗುರುವಾರ ಗುವಾಹಟಿ ಮೂಲಕ ತವಾಂಗ್‌ಗೆ ಬಂದಿದ್ದ ಈ ತಂಡವು, 13,000 ಅಡಿ ಎತ್ತರದಲ್ಲಿರುವ ಸುಂದರ ಸೇಲಾ ಸರೋವರವನ್ನು ನೋಡಲು ತೆರಳಿತ್ತು. ಈ ಸಮಯದಲ್ಲಿ ತಂಡದ ಒಬ್ಬ ಸದಸ್ಯ ಆಕಸ್ಮಿಕವಾಗಿ ಹೆಪ್ಪುಗಟ್ಟಿದ ಸರೋವರದ ಮಂಜುಗಡ್ಡೆಯ ಮೇಲೆ ಜಾರಿ ನೀರಿನೊಳಕ್ಕೆ ಬೀಳತೊಡಗಿದ. ಆತನನ್ನು ರಕ್ಷಿಸಲು ದಿನು ಮತ್ತು ಮಹದೇವ್ ತಕ್ಷಣವೇ ಮುಂದಾದರು. ನೀರಿನಲ್ಲಿ ಸಿಲುಕಿದ್ದ ಮೊದಲ ಪ್ರವಾಸಿಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಹೊರಬಂದನಾದರೂ, ಆತನನ್ನು ರಕ್ಷಿಸಲು ಹೋದ ದಿನು ಮತ್ತು ಮಹದೇವ್ ಐಸ್ ಪದರ ಒಡೆದು ಕೊರೆಯುವ ಚಳಿಯ ನೀರಿನೊಳಕ್ಕೆ ತಳ್ಳಲ್ಪಟ್ಟರು.
ಘಟನೆ ನಡೆದ ತಕ್ಷಣ ಜಿಲ್ಲಾ ಪೊಲೀಸ್, ಕೇಂದ್ರ ಪಡೆಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದವು. ಮಂಜು ಮುಸುಕಿದ ವಾತಾವರಣ ಮತ್ತು ಕಡಿಮೆ ಗೋಚರತೆಯ ನಡುವೆಯೂ ರಕ್ಷಣಾ ತಂಡವು ದಿನು ಅವರ ಮೃತದೇಹವನ್ನು ಹೊರತೆಗೆಯಲು ಯಶಸ್ವಿಯಾಗಿದೆ. ಆದರೆ, ತೀವ್ರ ಚಳಿ ಮತ್ತು ಕತ್ತಲೆಯಿಂದಾಗಿ ನಾಪತ್ತೆಯಾದ ಮಹದೇವ್ ಅವರಿಗಾಗಿ ನಡೆಸುತ್ತಿದ್ದ ಹುಡುಕಾಟವನ್ನು ಶುಕ್ರವಾರ ಸಂಜೆ ಸ್ಥಗಿತಗೊಳಿಸಲಾಯಿತು. ಶನಿವಾರ ಮುಂಜಾನೆಯಿಂದಲೇ ಮತ್ತೆ ಶೋಧ ಕಾರ್ಯ ಆರಂಭವಾಗಿದೆ.
ಪ್ರವಾಸಿಗರ ನಿರ್ಲಕ್ಷ್ಯದ ಬಗ್ಗೆ ಆಡಳಿತ ಮಂಡಳಿ ಎಚ್ಚರಿಕೆ
ಸೇಲಾ ಸರೋವರದಂತಹ ಎತ್ತರದ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಮಂಜುಗಡ್ಡೆಯ ಪದರವು ತುಂಬಾ ತೆಳುವಾಗಿರುತ್ತದೆ ಮತ್ತು ಅದು ಮನುಷ್ಯನ ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಡಿಸೆಂಬರ್‌ನಲ್ಲೇ ಪ್ರವಾಸಿಗರಿಗೆ ಮಾರ್ಗಸೂಚಿ ಪ್ರಕಟಿಸಿತ್ತು. ಸರೋವರದ ಸುತ್ತಲೂ “ಹೆಪ್ಪುಗಟ್ಟಿದ ನೀರಿನ ಮೇಲೆ ನಡೆಯಬೇಡಿ” ಎಂದು ಎಚ್ಚರಿಕೆ ಫಲಕಗಳನ್ನು ಹಾಕಲಾಗಿದ್ದರೂ, ಪ್ರವಾಸಿಗರು ಅಪಾಯಕಾರಿ ಸಾಹಸಕ್ಕೆ ಕೈಹಾಕಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಿ.ಡಬ್ಲ್ಯೂ. ಥಾಂಗೋನ್ ತಿಳಿಸಿದ್ದಾರೆ.
ಇದನ್ನೂ ಓದಿ : ನಿಂತಿದ್ದ ಪಿಕಪ್ಗೆ ಶಾಲಾ ಓಮಿನಿ ಡಿಕ್ಕಿ | ಚಾಲಕ ಸೇರಿ ನಾಲ್ವರು ಮಕ್ಕಳಿಗೆ ಗಂಭೀರ ಗಾಯ!



















