ಮ್ಯಾಡ್ರಿಡ್ : ಸ್ಪೇನ್‌ನ ದಕ್ಷಿಣ ಭಾಗದ ಆ್ಯಂಡಲೂಸಿಯಾ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಎರಡು ಹೈ-ಸ್ಪೀಡ್ (ಅತಿವೇಗದ) ರೈಲುಗಳ ನಡುವಿನ ಅಪಘಾತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಭೀಕರ ದುರಂತದಲ್ಲಿ 39 ಜನರು ಸಾವನ್ನಪ್ಪಿದ್ದು, 73ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 30ಕ್ಕೂ ಹೆಚ್ಚು ಜನರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮಲಾಗಾದಿಂದ ಮ್ಯಾಡ್ರಿಡ್‌ಗೆ ತೆರಳುತ್ತಿದ್ದ ‘ಇರಿಯೊ’ ಕಂಪನಿಗೆ ಸೇರಿದ ಹೈ-ಸ್ಪೀಡ್ ರೈಲು ಆಡಮಜ್ ಎಂಬಲ್ಲಿ ಹಳಿ ತಪ್ಪಿ ಪಕ್ಕದ ಹಳಿ ಮೇಲೆ ಬಿದ್ದಿದೆ. ಇದೇ ಸಮಯದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ರೈಲು ಇದಕ್ಕೆ ಡಿಕ್ಕಿ ಹೊಡೆದಿದೆ. ಎರಡು ರೈಲುಗಳ ವೇಗ ಹೆಚ್ಚಾಗಿದ್ದರಿಂದ ಡಿಕ್ಕಿಯ ರಭಸಕ್ಕೆ ಬೋಗಿಗಳು ನಜ್ಜುಗುಜ್ಜಾಗಿದ್ದು, ಕೆಲವು ಬೋಗಿಗಳು ಸುಮಾರು ನಾಲ್ಕು ಮೀಟರ್ ಆಳದ ಹಳ್ಳಕ್ಕೆ ಉರುಳಿ ಬಿದ್ದಿವೆ. ಸುಮಾರು 300 ಪ್ರಯಾಣಿಕರು ಈ ರೈಲಿನಲ್ಲಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ತುರ್ತು ಸೇವೆಗಳ ತಂಡ ಮತ್ತು ಮಿಲಿಟರಿ ಘಟಕಗಳು ಹಗಲಿರುಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಹಳಿ ತಪ್ಪಿದ ಬೋಗಿಗಳ ಲೋಹದ ಭಾಗಗಳು ಒಂದಕ್ಕೊಂದು ಸಿಕ್ಕಿಹಾಕಿಕೊಂಡಿರುವುದರಿಂದ ಒಳಗೆ ಸಿಲುಕಿರುವವರನ್ನು ಹೊರತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. “ಜೀವಂತವಿರುವವರನ್ನು ರಕ್ಷಿಸಲು ನಾವು ಮೃತದೇಹಗಳನ್ನು ಪಕ್ಕಕ್ಕೆ ಸರಿಸಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿತು” ಎಂದು ಅಗ್ನಿಶಾಮಕ ದಳದ ಮುಖ್ಯಸ್ಥರು ತಿಳಿಸಿದ್ದಾರೆ.
“ವಿಚಿತ್ರ” ದುರಂತ: ಸಾರಿಗೆ ಸಚಿವ
ಈ ರೈಲು ಅವಘಡ ಕುರಿತು ಪ್ರತಿಕ್ರಿಯಿಸಿರುವ ಸ್ಪೇನ್‌ನ ಸಾರಿಗೆ ಸಚಿವ ಆಸ್ಕರ್ ಪುಯೆಂಟೆ, ಇದೊಂದು ಅತ್ಯಂತ ವಿಚಿತ್ರ ಮತ್ತು ಅನಿರೀಕ್ಷಿತ ಘಟನೆ ಎಂದು ಬಣ್ಣಿಸಿದ್ದಾರೆ. ಹಳಿಗಳು ಇತ್ತೀಚೆಗಷ್ಟೇ ನವೀಕರಣಗೊಂಡಿದ್ದವು ಮತ್ತು ಹಳಿ ತಪ್ಪಿದ ರೈಲು ಕೂಡ ತೀರಾ ಹೊಸದಾಗಿತ್ತು. ನೇರವಾದ ಹಳಿಯಲ್ಲಿ ಇಂತಹ ದುರಂತ ಸಂಭವಿಸಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ತನಿಖೆಗೆ ಆದೇಶಿಸಲಾಗಿದೆ. ಸದ್ಯಕ್ಕೆ ಮ್ಯಾಡ್ರಿಡ್, ಸೆವಿಲ್ಲೆ ಮತ್ತು ಮಲಾಗಾ ನಡುವಿನ ಎಲ್ಲಾ ಹೈ-ಸ್ಪೀಡ್ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಸಂತಾಪದ ಸುರಿಮಳೆ
ಅಪಘಾತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್, “ಇದು ಇಡೀ ದೇಶಕ್ಕೆ ಅತೀವ ನೋವಿನ ರಾತ್ರಿ” ಎಂದು ಶೋಕಿಸಿದ್ದಾರೆ. ಸ್ಪೇನ್‌ನ ರಾಜ ಫೆಲಿಪೆ VI ಮತ್ತು ರಾಣಿ ಲೆಟಿಜಿಯಾ ಕೂಡ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಹಲವು ವಿಶ್ವ ನಾಯಕರು ಈ ದುರಂತಕ್ಕೆ ಕಂಬನಿ ಮಿಡಿದಿದ್ದಾರೆ. 2013ರ ನಂತರ ಸ್ಪೇನ್‌ನಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ದುರಂತ ಇದಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಕರೂರು ಕಾಲ್ತುಳಿತ ಪ್ರಕರಣ | 2ನೇ ಬಾರಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್!



















