ಚಾಂಪಿಯನ್ಸ್ ಟ್ರೋಫಿಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ 8 ತಂಡಗಳು ಕಣಕ್ಕೆ ಇಳಿಯಲು ಸಜ್ಜಾಗುತ್ತಿವೆ. ಟೂರ್ನಿಯನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಟೂರ್ನಿ ಆಯೋಜಿಸುತ್ತಿದ್ದು, ಎಲ್ಲ ತಯಾರಿ ಕೂಡ ಮಾಡಿಕೊಂಡಿದೆ. ಭಾಗವಹಿಸುತ್ತಿರುವ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ್, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ್ ತಂಡಗಳು ಕಾಣಿಸಿಕೊಂಡಿವೆ. ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಮತ್ತು ಇಂಗ್ಲೆಂಡ್ ತಂಡಗಳು ಕಾಣಿಸಿಕೊಳ್ಳಲಿವೆ. ಲೀಗ್ ಹಂತದಲ್ಲಿ ಪ್ರತಿಯೊಂದು ತಂಡಗಳು ಮೂರು ಪಂದ್ಯಗಳನ್ನು ಆಡಲಿವೆ.
ಚಾಂಪಿಯನ್ಸ್ ಟ್ರೋಫಿಯು 2025ರ ಫೆಬ್ರವರಿ 19 ರಿಂದ ಮಾರ್ಚ್ 9 ರ ವರೆಗೆ ನಡೆಯಲಿದೆ. ಇದಕ್ಕಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಭಾರತ ತಂಡವು ಪಾಕ್ ಗೆ ತೆರಳುವುದಿಲ್ಲ ಎಂದು ಹೇಳಿದ ನಂತರ ಹಲವು ಗೊಂದಲಗಳು ನಿರ್ಮಾಣವಾಗಿದ್ದವು. ಹೈಬ್ರಿಡ್ ಮಾದರಿಯ ಟೂರ್ನಿ ಆಯೋಜಿಸಿದರೆ ಮಾತ್ರ ಭಾಗವಹಿಸಲಾಗುವುದು ಎಂದು ಬಿಸಿಸಿಐ ಹೇಳಿತ್ತು. ಪಾಕಿಸ್ತಾನ್ ಎಷ್ಟೇ ತಿಪ್ಪರಲಾಗ ಹಾಕಿದರೂ ಬಿಸಿಸಿಐ ಬೇಡಿಕೆಗೆ ನ್ಯಾಯ ಸಿಕ್ಕಂತಾಗಿದೆ. ಹೀಗಾಗಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ.
ಟೂರ್ನಿಯು ಪಾಕಿಸ್ತಾನದಲ್ಲೇ ಜರುಗಿದರೂ ಭಾರತ ಪಂದ್ಯಗಳಿಗೆ ಯುಎಇ ಅಥವಾ ಶ್ರೀಲಂಕಾ ಆತಿಥ್ಯ ವಹಿಸಲಿದೆ. ಭಾರತ ಮತ್ತು ಪಾಕಿಸ್ತಾನ್ ತಂಡಗಳು ತಟಸ್ಥ ಸ್ಥಳದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.