ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಶುಕ್ರವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಉಂಟಾದ ವ್ಯಾಪಕ ಪ್ರವಾಹ ಹಾಗೂ ಭೂಕುಸಿತದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಧಾರಾಕಾರ ಮಳೆಯಿಂದ ಜನಜೀವನವು ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಶನಿವಾರ ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಯು ಮುಂಬೈನಲ್ಲಿ ರಸ್ತೆಗಳನ್ನು ಜಲಾವೃತಗೊಳಿಸಿದೆ, ದೈನಂದಿನ ಜೀವನಕ್ಕೆ ಅಡ್ಡಿಪಡಿಸಿದೆ ಮತ್ತು ಇಬ್ಬರ ಸಾವಿಗೆ ಕಾರಣವಾಗಿದೆ. ಅಲ್ಲದೇ, ಇಂದು ಮತ್ತಷ್ಟು ಮಳೆಯಾಗುವ ಭೀತಿಯಿದ್ದು, ಭಾರತೀಯ ಹವಾಮಾನ ಇಲಾಖೆ ಮುಂಬೈ ಮತ್ತು ನೆರೆಯ ರಾಯಗಢ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಇತರೆ ಪ್ರದೇಶಗಳಲ್ಲೂ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.
ನಗರದ ವಿಕ್ರೋಲಿ ಪಶ್ಚಿಮ ಪ್ರದೇಶದ ವರ್ಷಾ ನಗರದ ವಸತಿ ಸಂಕೀರ್ಣವೊಂದರಲ್ಲಿ ಭೂಕುಸಿತ ಸಂಭವಿಸಿ ಇಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ. ರಕ್ಷಣಾ ತಂಡಗಳು ಅವಶೇಷಗಳನ್ನು ತೆರವುಗೊಳಿಸಲು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
ಸಿಯಾನ್, ಕುರ್ಲಾ, ಚೆಂಬೂರ್ ಮತ್ತು ಅಂಧೇರಿ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಸಿಯಾನ್‌ನ ಶಣ್ಮುಖಾನಂದ ಹಾಲ್ ರಸ್ತೆಯಲ್ಲಿ ಸುಮಾರು ಒಂದರಿಂದ ಒಂದೂವರೆ ಅಡಿ ನೀರು ಸಂಗ್ರಹವಾಗಿದೆ. ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ವಾಹನಗಳು ಸಿಲುಕಿಕೊಂಡಿವೆ. ನೀರು ತುಂಬಿದ್ದರಿಂದ ಅಂಧೇರಿ ಸುರಂಗಮಾರ್ಗವನ್ನು ಮುಚ್ಚಿದ್ದು, ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯಾಗಿದೆ.
ಶುಕ್ರವಾರ ಬೆಳಿಗ್ಗೆ 8:30ರಿಂದ ಶನಿವಾರ ಬೆಳಿಗ್ಗೆ 5:30 ರ ನಡುವಿನ 21 ಗಂಟೆಗಳಲ್ಲಿ, ವಿಕ್ರೋಲಿಯಲ್ಲಿ 248.5 ಮಿಮೀ ಮಳೆ ದಾಖಲಾಗಿದೆ. ಸಾಂತಾಕ್ರೂಜ್ ನಲ್ಲಿ 232.5 ಮಿಮೀ ಮತ್ತು ಸಿಯಾನ್ ನಲ್ಲಿ 221 ಮಿಮೀ ಮಳೆಯಾಗಿದೆ.
ಶುಕ್ರವಾರ ರಾತ್ರಿ 11 ರಿಂದ ಶನಿವಾರ ಬೆಳಿಗ್ಗೆ 5 ರ ನಡುವೆ ಭಾರಿ ಮಳೆ ದಾಖಲಾಗಿದೆ. ಪಶ್ಚಿಮ ಉಪನಗರಗಳಲ್ಲಿನ ಮರೋಲ್ ಅಗ್ನಿಶಾಮಕ ವಿಭಾಗವು 216 ಮಿಮೀ ಮಳೆ ದಾಖಲಿಸಿದ್ದರೆ, ಸಾಂತಾಕ್ರೂಜ್‌ನ ನಾರಿಯಲ್ವಾಡಿ ಶಾಲೆಯಲ್ಲಿ 213 ಮಿಮೀ ಮತ್ತು ವಿಕ್ರೋಲಿಯ ಟ್ಯಾಗೋರ್ ನಗರ ಶಾಲೆಯಲ್ಲಿ 213 ಮಿಮೀ ಮಳೆ ದಾಖಲಾಗಿದೆ. ದಾದರ್ ಅಗ್ನಿಶಾಮಕ ವಿಭಾಗ ಮತ್ತು ವರ್ಲಿ ಸೀಫೇಸ್ ಸೇರಿದಂತೆ ಇತರ ಸ್ಥಳಗಳಲ್ಲಿ ಕೇವಲ ಐದು ಗಂಟೆಗಳಲ್ಲಿ 130 ಮಿಮೀಗಿಂತ ಹೆಚ್ಚು ಮಳೆ ದಾಖಲಾಗಿದೆ.
ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರಕ್ಕೂ ಅಡ್ಡಿಯಾಗಿದೆ. ಇಂಡಿಗೋ ಏರ್ಲೈನ್ಸ್ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸುವಂತೆ ಸೂಚಿಸಿದೆ. “ನಮ್ಮ ತಂಡಗಳು ಯಾವುದೇ ವಿಳಂಬವನ್ನು ಕಡಿಮೆ ಮಾಡಲು ಮತ್ತು ಪ್ರತಿ ಹಂತದಲ್ಲೂ ನಿಮಗೆ ಸಹಾಯ ಮಾಡಲು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿವೆ” ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.



















