ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ರಾಜ್ಯ ಸರ್ಕಾರ ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬ ಆರೋಪಗಳು, ದೂರುಗಳು ಕೇಳಿಬರುತ್ತಿವೆ. ನಿರುದ್ಯೋಗಿ ಪದವೀಧರರು ಕೂಡ ನೇಮಕಾತಿಗಾಗಿ ಆಗಾಗ ಆಗ್ರಹಿಸುತ್ತಲೇ ಇರುತ್ತಾರೆ. ಇದರ ಬೆನ್ನಲ್ಲೇ, ರಾಜ್ಯದ ಹಲವು ಇಲಾಖೆಗಳಲ್ಲಿ 2,76,386 ಹುದ್ದೆಗಳು ಖಾಲಿ ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಶಾಸಕ ರವಿಕುಮಾರ ಗಣಿಗ ಅವರು ಖಾಲಿ ಹುದ್ದೆಗಳ ಕುರಿತು ವಿಧಾನಸಭೆ ಕಲಾಪದಲ್ಲಿ ಲಿಖಿತ ಪ್ರಶ್ನೆ ಕೇಳಿದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸಿದರು. ರಾಜ್ಯದಲ್ಲಿ ಒಟ್ಟು 7,80,748 ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ 5,04,362 ಹುದ್ದೆಗಳು ಭರ್ತಿಯಾಗಿವೆ. ಇನ್ನೂ 2,76,386 ಹುದ್ದೆಗಳು ಖಾಲಿ ಇವೆ ಎಂಬುದಾಗಿ ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿಯೇ 70,727 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಸಿ ದರ್ಜೆಯಲ್ಲಿಯೇ 60,219 ಹುದ್ದೆಗಳು ಖಾಲಿ ಇವೆ. ಇನ್ನು ಒಟ್ಟಾರೆಯಾಗಿ, ಎ ದರ್ಜೆಯ 16,017 ಹುದ್ದೆಗಳು, ಬಿ ದರ್ಜೆಯ 16,734, ಸಿ ದರ್ಜೆಯ 1,66,021 ಹುದ್ದೆಗಳು ಹಾಗೂ ಡಿ ದರ್ಜೆಯ 77,614 ಹುದ್ದೆಗಳು ಖಾಲಿ ಎಂಬುದಾಗಿ ಮುಖ್ಯಮಂತ್ರಿಯವರು ಬಜೆಟ್ ಅಧಿವೇಶನದ ಕಲಾಪದಲ್ಲಿ ಮಾಹಿತಿ ನೀಡಿದ್ದಾರೆ.
ಇಲಾಖೆವಾರು ಮಾಹಿತಿ
ಇಲಾಖೆವಾರು ಖಾಲಿ ಹುದ್ದೆಗಳ ಕುರಿತು ಕೂಡ ಸಿಎಂ ಮಾತನಾಡಿದ್ದಾರೆ. ಗೃಹ ಇಲಾಖೆಯಲ್ಲಿ 26,168, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,227, ಕಂದಾಯ ಇಲಾಖೆ 11,145, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 10,898, ಪಶು ಸಂಗೋಪನಾ ಇಲಾಖೆ 10,755, ಸಮಾಜ ಕಲ್ಯಾಣ ಇಲಾಖೆ 9,980, ಆರ್ಥಿಕ ಇಲಾಖೆ 9,536 ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,334 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ.