ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಮಂಡಿಸಿದ್ದು, ತೆರಿಗೆ ವಿನಾಯತಿ ನೀಡಿದ್ದಾರೆ. ಈ ಮೂಲಕ ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಇನ್ನು ಮುಂದೆ 12 ಲಕ್ಷ ರೂ. ವರೆಗೂ ಆದಾಯ ಇರುವವರು ತೆರಿಗೆ ಕಟ್ಟುವಂತಿಲ್ಲ. ಇದು ಸಣ್ಣ ಪುಟ್ಟ ವ್ಯಾಪಾರಸ್ಥರು, ಉತ್ತಮ ಸಂಬಳ ಪಡೆಯುವ ಕೆಲವು ಉದ್ಯೋಗಿಗಳಿಗೆ ಸಹಾಯಕವಾಗಲಿದೆ. ವೇತನದಾರರಿಗೆ 75 ಸಾವಿರ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಇರುವುದರಿಂದ ಒಟ್ಟು 12 ಲಕ್ಷದ 75 ಸಾವಿರ ರೂಪಾಯಿ ತನಕದ ಆದಾಯಕ್ಕೆ ತೆರಿಗೆ ಪಾವತಿ ಮಾಡುವಂತಿಲ್ಲ.
ಈ ಘೋಷಣೆಯಿಂದಾಗಿ 8 ಲಕ್ಷ ರೂ.ನಿಂದ 12 ಲಕ್ಷ ರೂ. ಆದಾಯಕ್ಕೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತದೆ. 12 ಲಕ್ಷ ರೂ.ನಿಂದ 16 ಲಕ್ಷ ರೂ. ತನಕ ಶೇ. 15ರ ವರೆಗೆ ತೆರಿಗೆ, 20 ಲಕ್ಷ ರೂ.ನಿಂತ 24 ಲಕ್ಷ ರೂ.ಗೆ ಶೇ. 25ರಷ್ಟು ತೆರಿಗೆ ಹಾಗೂ ಅದಕ್ಕಿಂತ ಹೆಚ್ಚು ಇರುವ ಆದಾಯದವರು ಶೇ. 30ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.
12 ಲಕ್ಷ ರೂ. ತನಕ ಟ್ಯಾಕ್ಸ್ ರಿಬೇಟ್ ಎಂದರೇನು?
ವಾರ್ಷಿಕ 4 ಲಕ್ಷ ರೂ.ಗಿಂತ ಹೆಚ್ಚು ಅದಾಯ ಇರುವಾಗ ತೆರಿಗೆ ಕಟ್ಟಬೇಕೆನ್ನುವುದು ಬಜೆಟ್ ನ ವ್ಯಾಖ್ಯಾನ. ಈಗ 12 ಲಕ್ಷ ರೂ. ತನಕ ಆದಾಯ ಇರುವವರಿಗೆ ಸರ್ಕಾರ ರಿಬೇಟ್ ನೀಡುತ್ತದೆ. ಆದಾಯ 12 ಲಕ್ಷ ರೂ. ಒಳಗೆ ಇದ್ದರೆ ಅದಕ್ಕೆ ರಿಬೇಟ್ ಪ್ರಕಾರ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 87 ಎ ಅಡಿಯಲ್ಲಿ ಈ ವಿನಾಯಿತಿ ಸಿಗುತ್ತದೆ. 12 ಲಕ್ಷಕ್ಕಿಂತ ಹೆಚ್ಚು ಆದಾಯವಿದ್ದರೂ 4 ಲಕ್ಷ ರೂ.ಯಿಂದಲೇ ಟ್ಯಾಕ್ಸ್ ಲೆಕ್ಕಚಾರ ಆರಂಭವಾಗುತ್ತದೆ.
4 ಲಕ್ಷ ರೂ.ವರೆಗೆ ತೆರಿಗೆ ಇರುವುದಿಲ್ಲ. ನಿಮ್ಮ ಸಂಬಳ ಅಥವಾ ಆದಾಯ 12 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಅದನ್ನು 4 ರಿಂದ 8 ಲಕ್ಷ ರೂ. 8 ರಿಂದ 12 ಲಕ್ಷ ರೂ. ಅಂತಾ ಆದಾಯವನ್ನು ವಿಂಗಡಿಸಿ ಶೇ. 5, ಶೇ. 10ರಂತೆ ತೆರಿಗೆ ಕಟ್ಟಬೇಕು. ಇನ್ನು ಮುಂದೆ ತೆರಿಗೆ ಕಟ್ಟುವ ಮೊತ್ತ ಕೂಡ ಕಡಿಮೆಯಾಗಲಿದೆ.
ಹಳೆಯ ತೆರಿಗೆ ಪದ್ಧತಿ?
ಈಗ ಘೋಷಣೆ ಮಾಡಿರುವ ಬಜೆಟ್ ನಂತರ ಹೊಸ ತೆರಿಗೆ ಪದ್ಧತಿ ಅನ್ವಯವಾಗುತ್ತದೆ. ಹಳೆಯ ತೆರಿಗೆ ವ್ಯವಸ್ಥೆ ಎಂದಿನಂತೆ ಮುಂದುವರಿಯಲಿದೆ.
ಯಾವುದು ಉತ್ತಮ?
12 ಲಕ್ಷ ರೂ.ಗಿಂತ ಹೆಚ್ಚು ಆದಾಯವಿದ್ದವರಿಗೆ ಹಳೆಯ ಪದ್ಧತಿಯೇ ಉತ್ತಮ ಎಂಬುವುದನ್ನು ಲೆಕ್ಕಾಚಾರ ಹೇಳುತ್ತಿದೆ.
ಟಿಡಿಎಸ್ ಮಿತಿ ಹೆಚ್ಚಳ
ಬಾಡಿಗೆ ಕುರಿತ ಟಿಡಿಎಸ್ ಮಿತಿಯನ್ನು 2.40 ಲಕ್ಷ ರೂ.ಯಿಂದ 6 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ವೃತ್ತಿಪರ ಶುಲ್ಕಗಳ ಮೇಲಿನ ಟಿಡಿಎಸ್ ಮಿತಿಯನ್ನು 30 ಸಾವಿರ ರೂ.ಯಿಂದ 50 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ.
ಡಿವಿಡೆಂಡ್ ಮೇಲಿನ ಟಿಡಿಎಸ್ ಮಿತಿಯನ್ನು 5 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೆ ಏರಿಸಲಾಗಿದೆ. ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳ ಕುರಿತ ಬಡ್ಡಿಯ ಮೇಲಿನ ಟಿಡಿಎಸ್ ಮಿತಿ 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಏರಿಕೆ ಮಾಡಲಾಗಿದೆ.