2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್, ಮಾಜಿ ಚಾಂಪಿಯನ್ ಭಾರತ ಸೇರಿದಂತೆ 4 ತಂಡಗಳು ಸೆಮಿಫೈನಲ್ ಗೆ ಎಂಟ್ರಿಯಾಗಿವೆ.
ಭಾರತ ತಂಡ ಸೂಪರ್ 8ರಲ್ಲಿ ತಾನಾಡಿದ ಎಲ್ಲ ಮೂರು ಪಂದ್ಯಗಳನ್ನು ಗೆದ್ದಿದೆ. ಜೂನ್ 27ರ ಸಂಜೆ ಭಾರತೀಯ ಕಾಲಮಾನ 8 ಗಂಟೆಯಿಂದ ಆರಂಭವಾಗಲಿರುವ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 2022ರ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡವು ಇದೇ ಇಂಗ್ಲೆಂಡ್ ಎದುರು ಸೋಲು ಕಂಡಿತ್ತು. ಈಗ ಸೋಲಿನ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ. ಅಲ್ಲದೇ, ಟೀಂ ಇಂಡಿಯಾಗೆ ಸೆಮಿಫೈನಲ್ ನಲ್ಲಿ ಗೆಲ್ಲದೆಯೇ ಫೈನಲ್‌ಗೇರುವ ಸುವರ್ಣಾವಕಾಶ ಇದೆ ಎನ್ನುವುದು ಅಚ್ಚರಿಯಾದರೂ ಸತ್ಯ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜೂನ್ 27ರಂದು ಗಯಾನದಲ್ಲಿ ಎರಡನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಟೂರ್ನಿಯಿಂದ ಹೊರಬೀಳಲಿದ್ದು, ಟೀಂ ಇಂಡಿಯಾ ಅನಾಯಾಸವಾಗಿ ಫೈನಲ್ ಗೇರಲಿದೆ.
2024ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೆ ಯಾವುದೇ ಮೀಸಲು ದಿನ ಲಭ್ಯವಿಲ್ಲ. ಹೀಗಾಗಿ ಮಳೆಯಿಂದ ಸೆಮಿಫೈನಲ್ ಪಂದ್ಯ ರದ್ದಾದರೆ ಗ್ರೂಪ್ ಹಂತದ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ತಂಡವು ಫೈನಲ್‌ಗೆ ಪ್ರವೇಶ ಪಡೆಯುವುದು ನಿಶ್ಚಿತ. ಭಾರತ ತಂಡವು ಗ್ರೂಪ್ 1 ವಿಭಾಗದಲ್ಲಿ ಮೂರು ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಇನ್ನೊಂದೆಡೆ ಇಂಗ್ಲೆಂಡ್ ತಂಡವು ಗ್ರೂಪ್ 2 ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಪಂದ್ಯ ರದ್ದಾದರೇ ಭಾರತ ಫೈನಲ್ ಪ್ರವೇಶ ಮಾಡುವುದು ನಿಶ್ಚಿತವಾಗಿದೆ.