ಮುಂಬೈ: ಮಹಾರಾಷ್ಟ್ರದ ನಗರಸಭೆ ಚುನಾವಣೆಗಳಲ್ಲಿ ಒಂದೇ ಒಂದು ಮತ ಚಲಾವಣೆಗೂ ಮುನ್ನವೇ ಬಿಜೆಪಿ-ಶಿವಸೇನೆ ಒಕ್ಕೂಟವು 66 ವಾರ್ಡ್ಗಳಲ್ಲಿ ಗೆದ್ದಿದ್ದು, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿದೆ.
ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನವಾದ ಶುಕ್ರವಾರ, ಇತರ ಪಕ್ಷಗಳು ಮತ್ತು ಒಕ್ಕೂಟಗಳ ಹಲವಾರು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದುಕೊಂಡ ಕಾರಣ, ಈ 68 ನಾಯಕರು ಸ್ಪರ್ಧೆಯಿಲ್ಲದೆ ಗೆಲುವು ಸಾಧಿಸಿದ್ದಾರೆ.
ಆದರೆ ಶಿವಸೇನೆ (ಉದ್ಧವ್ ಠಾಕ್ರೆ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಕ್ಷಗಳು ಅಧಿಕಾರದಲ್ಲಿರುವ ಮಹಾಯುತಿ ಸರ್ಕಾರವು ಹಣ ಮತ್ತು ಬೆದರಿಕೆ ಹಾಕಿ ವಿರೋಧ ಪಕ್ಷಗಳ ಅಭ್ಯರ್ಥಿಗಳನ್ನು ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದೆ ಎಂದು ಆರೋಪಿಸಿವೆ. ಈ ಹಿನ್ನೆಲೆಯಲ್ಲಿ ಒತ್ತಡ ಅಥವಾ ಹಣದ ಪ್ರಭಾವದಿಂದ ನಾಮಪತ್ರಗಳನ್ನು ವಾಪಸ್ ಪಡೆಯಲಾಗಿದೆಯೇ ಎಂದು ರಾಜ್ಯ ಚುನಾವಣಾ ಆಯೋಗವು ತನಿಖೆ ನಡೆಸಬೇಕು ಎಂದೂ ಒತ್ತಾಯಿಸಿವೆ.
ಕಲ್ಯಾಣ-ಡೊಂಬಿವಲಿಯಲ್ಲಿ ಮಹಾಯುತಿ ಪ್ರಾಬಲ್ಯ
ಮುಂಬೈ ಮಹಾನಗರ ಪ್ರದೇಶದ ಪ್ರಮುಖ ಕಲ್ಯಾಣ-ಡೊಂಬಿವಲಿ ಮಹಾನಗರ ಪಾಲಿಕೆಯಲ್ಲಿ ಮಹಾಯುತಿಗೆ ಅತಿ ಹೆಚ್ಚು ಗೆಲುವು ದಾಖಲಾಗಿದ್ದು, ಇಲ್ಲಿ 21 ಮಹಾಯುತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ 15 ಮಂದಿ ಬಿಜೆಪಿ ಮತ್ತು 6 ಮಂದಿ ಶಿವಸೇನೆ ಪಕ್ಷದವರು.
ಬಿಜೆಪಿ ಮತ್ತು ಶಿವಸೇನೆ ಎರಡಕ್ಕೂ ರಾಜಕೀಯ ನೆಲೆಯಾಗಿರುವಂಥ ಉತ್ತರ ಮಹಾರಾಷ್ಟ್ರದ ಜಲಗಾಂವ್ನಲ್ಲಿ, ಪ್ರತಿ ಪಕ್ಷವೂ 6 ಸ್ಥಾನಗಳಲ್ಲಿ ಗೆದ್ದಿವೆ. ಮುಂಬೈ ಮಹಾನಗರ ಪ್ರದೇಶದ ಪನ್ವೇಲ್ನಲ್ಲಿ 7 ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಕೆಲ ಕಾಲದಿಂದ ಶರದ್ ಪವಾರ್ ಅವರ ಎನ್ಸಿಪಿಯ ಭದ್ರಕೋಟೆಯಾಗಿರುವ ಭಿವಂಡಿಯಲ್ಲಿಯೂ ಬಿಜೆಪಿ 6 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಏಕನಾಥ್ ಶಿಂದೆ ಅವರ ತವರೂರಾದ ಠಾಣೆಯಲ್ಲಿ ಬಿಜೆಪಿಯೊಂದಿಗೆ ಸಣ್ಣ ಮಟ್ಟಿನ ಭಿನ್ನಾಭಿಪ್ರಾಯದ ನಡುವೆಯೂ ಉಪಮುಖ್ಯಮಂತ್ರಿ ಶಿಂದೆ ಅವರ ಶಿವಸೇನೆ 6 ಗೆಲುವುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಇತರ ಸ್ಥಳಗಳಲ್ಲಿಯೂ ಸಣ್ಣ ಆದರೆ ರಾಜಕೀಯವಾಗಿ ಮಹತ್ವದ ಲಾಭಗಳು ದಾಖಲಾಗಿವೆ. ಧುಲೆಯಲ್ಲಿ 3 ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆಯಿಲ್ಲದೆ ಗೆದ್ದಿದ್ದು, ಅಹಿಲ್ಯಾನಗರದಲ್ಲಿ ಎನ್ಸಿಪಿ ಶರದ್ ಬಣ 2 ಮತ್ತು ಬಿಜೆಪಿ 1 ಸ್ಥಾನ ಗಳಿಸಿವೆ. ಈ ಗೆಲುವುಗಳು ರಾಜ್ಯದ ಆಡಳಿತಾರೂಢ ಮಹಾಯುತಿ ಒಕ್ಕೂಟಕ್ಕೆ ಹೊಸ ಉತ್ತೇಜನ ನೀಡಿದೆ.
ಇದನ್ನೂ ಓದಿ: ಫೋಟೋ ಹಂಚಿಕೊಂಡು ನಿಶ್ಚಿತಾರ್ಥದ ಸುದ್ದಿ ಬಹಿರಂಗಪಡಿಸಿದ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ



















