ಬೆಂಗಳೂರು: ಫೋನ್ ಪೇ, ಗೂಗಲ್ ಪೇ ಸೇರಿ ಹಲವು ಆ್ಯಪ್ ಗಳ ಮೂಲಕ ಮಾಡುವ ಯುಪಿಐ ಪಾವತಿಗೆ ಕೇಂದ್ರ ಸರ್ಕಾರ ಜಿಎಸ್ ಟಿ ವಿಧಿಸುತ್ತದೆ. ಅದರಲ್ಲೂ, 2 ಸಾವಿರ ರೂಪಾಯಿ ಪೇಮೆಂಟ್ ಮಾಡಿದರೂ ಶೇ.18ರಷ್ಟು ಜಿಎಸ್ ಟಿ ಪಾವತಿಸಬೇಕು ಎಂಬ ಸುದ್ದಿ ಹರಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಮಹತ್ವದ ಸ್ಪಷ್ಟನೆ ನೀಡಿದೆ. ಯುಪಿಐ ಪೇಮೆಂಟ್ ಮೇಲೆ ಜಿಎಸ್ ಟಿ ವಿಧಿಸುವ ವರದಿಗಳು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದೆ.
ಹೌದು, ವರದಿಗಳ ಕುರಿತು ಕೇಂದ್ರ ಸರ್ಕಾರದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಪ್ರಕಟಣೆ ಹೊರಡಿಸಿದೆ. “2 ಸಾವಿರ ರೂಪಾಯಿ ಪೇಮೆಂಟ್ ಮಾಡಿದರೂ ಶೇ.18ರಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ ಎಂಬ ವರದಿಗಳು ಆಧಾರರಹಿತವಾಗಿವೆ. ಕೇಂದ್ರ ಸರ್ಕಾರದ ಬಳಿ ಜಿಎಸ್ ಟಿ ವಿಧಿಸುವ ಯಾವುದೇ ಪ್ರಸ್ತಾವನೆಗಳಿಲ್ಲ” ಎಂದು ಪ್ರಕಟಣೆ ತಿಳಿಸಿದೆ.
“ಕೇಂದ್ರ ಸರ್ಕಾರವು ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜನ ನೀಡುತ್ತಿದೆ. ಹಾಗಾಗಿ, ಜಿಎಸ್ ಟಿ ವಿಧಿಸಬೇಕು ಎಂಬ ಪ್ರಸ್ತಾವನೆಯನ್ನೇ ಹೊಂದಿಲ್ಲ. ಮುಂದಿನ ದಿನಗಳಲ್ಲೂ ಯುಪಿಐ ಪಾವತಿಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ” ಎಂದು ವರದಿಗಳ ಹಿನ್ನೆಲೆಯಲ್ಲಿ ಪಿಐಬಿಯು ಸ್ಪಷ್ಟನೆ ನೀಡಿದೆ.
ಕೇಂದ್ರ ಸರ್ಕಾರವು ಜಿಎಸ್ ಟಿ ವಿಧಿಸುತ್ತದೆ ಎಂಬ ವರದಿಗಳು ಹರಡಿದ ಹಿನ್ನೆಲೆಯಲ್ಲಿ ಗ್ರಾಹಕರು ಹಾಗೂ ವ್ಯಾಪಾರಿಗಳಲ್ಲಿ ಆತಂಕ ಮನೆಮಾಡಿತ್ತು. ಕೇವಲ 2 ಸಾವಿರ ರೂಪಾಯಿ ಟ್ರಾನ್ಸ್ ಫರ್ ಅಥವಾ ಯುಪಿಐ ಮಾಡಿದರೂ ಜಿಎಸ್ ಟಿ ಪಾವತಿಸಬೇಕು ಎಂಬ ಭೀತಿ ಎದುರಾಗಿತ್ತು. ಇದರ ಬೆನ್ನಲ್ಲೇ ಜಿಎಸ್ ಟಿ ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರವೇ ಸ್ಪಷ್ಟನೆ ನೀಡಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ.