ಬೆಂಗಳೂರು: ಮಾಜಿ ಡಿಸಿಎಂ ಹಾಗೂ ಶಾಸಕ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಬೆಸ್ಕಾಂ, ಎಸ್ಕಾಂಗಳಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಮೀಟರ್ ಹಾಗೂ ಸಾಫ್ಟ್‌ವೇರ್ ಗಳ ಹೆಸರಿನಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಬೇಕಿದೆ. ಈಗಾಗಲೇ ನಾನು ಜನರ ಗಮನ ಸೆಳೆದಿದ್ದೇನೆ. ಸದನದಲ್ಲಿ ಮಾತನಾಡಿದ್ದೇನೆ. ಅಧಿಕಾರ ದುರ್ಬಳಕೆ ಮಾಡಿಕೊಂಡು, ಸ್ಕ್ಯಾಮ್ ಮಾಡಲಾಗಿದೆ. ಈ ಕುರಿತು ಮತ್ತೆ ಉತ್ತರ ನೀಡುತ್ತೇನೆ ಎಂದಿದ್ದಾರೆ.
ಅತಿ ವೇಗವಾಗಿ ಇಂಧನ ಇಲಾಖೆ ಬೆಳೆಯುತ್ತಿದೆ. ಈ ಇಲಾಖೆ ಶೇ. 30ರಷ್ಟು ವೇಗವಾಗಿ ಬೆಳೆಯುತ್ತಿದೆ. ಫ್ಯೂಯಲ್‌ನಿಂದ ಎಲೆಕ್ಟ್ರಿಕ್ ವೆಹಿಕಲ್ ವರೆಗೂ ಈ ಇಲಾಖೆಯೇ ನಿಭಾಯಿಸುತ್ತಿದೆ. ಸದ್ಯ ಈ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶ ಗಮನಿಸಿದರೆ, ಅವ್ಯವಹಾರವಾಗಿರುವುದು ಗಮನಕ್ಕೆ ಬರುತ್ತದೆ. ಬೆಸ್ಕಾಂ ಹಾಗೂ ಎಸ್ಕಾಂಗಳಲ್ಲಿ 15,568 ಕೋಟಿ ರೂ. ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ.
ಸ್ಮಾರ್ಟ್ ಮೀಟರ್ ಅಳವಡಿಸಲೇಬೇಕೆಂದು ಎಲ್ಲಿಯೂ ಕಡ್ಡಾಯವಾಗಿ ಹೇಳಿಲ್ಲ. ಹೊಸ ಗ್ರಾಹಕರಿಗೂ ಕಡ್ಡಾಯ ಮಾಡುವಂತಿಲ್ಲ. ಈ ನಿಯಮ ಕೆಇಆರ್ ಸಿಯಲ್ಲಿಯೇ ಇದೆ. ಟೆಂಡರ್ ಬಿಡ್ ನಲ್ಲಿ ಕೂಡ ಕಡ್ಡಾಯದ ಕುರಿತು ಉಲ್ಲೇಖಿಸಿಲ್ಲ. ಆದರೆ, ಈಗ ಬ್ಲಾಕ್ ಲಿಸ್ಟ್‌ಗೆ ಸೇರಿರುವ ಕಂಪನಿಗಳಿಗೆ ಜಾಯಿಂಟ್ ವೆಂಚರ್ ಮಾಡಿಕೊಂಡಿದ್ದಾರೆ. ಒಟ್ಟಾರೇ ಈ ಯೋಜನೆಯ ಮೊತ್ತ ತೋರಿಸದೇ ಇಲ್ಲಿ ಟೆಂಡರ್ ನೀಡಲಾಗಿದೆ. ಇಲ್ಲಿ ಕೆಟಿಪಿಪಿ ಆಕ್ಟ್ ನ್ನು ಉಲ್ಲಂಘನೆ ಮಾಡಲಾಗಿದೆ. ಇಲ್ಲಿ ಅಳವಡಿಸಿರುವುದು ಡಿಜಿಟಲ್ ಮೀಟರ್ ಅಷ್ಟೇ.
ಮೈಸೂರು ಸ್ಮಾರ್ಟ್ ಮೀಟರ್‌ನ ಹಬ್. ಅಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ. ವಿದ್ಯುತ್ ಸೋರಿಕೆ ತಡೆಯುವ ನಿಟ್ಟಿನಲ್ಲಿ ಈ ಸ್ಮಾರ್ಟ್ ಮೀಟರ್ ಅಳವಡಿಸಲಾಗಿರುತ್ತದೆ.
ಸ್ಮಾರ್ಟ್ ಮೀಟರ್ ಗಳ ಖರೀದಿಯಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆಯಾಗಿದೆ. ರಾಜಶ್ರೀ ಕಂಪನಿಗೆ ಅನುಕೂಲ ಆಗುವಂತೆ ಟೆಂಡರ್ ನೀಡಲಾಗಿದೆ. ಟೆಂಡರ್ ಪಡೆದುಕೊಳ್ಳುವ ಸಂಸ್ಥೆ ಬಳಿ 6,800 ಕೋಟಿ ರೂ. ಬಿಡ್ ಸಾಮರ್ಥ್ಯ ಮೊತ್ತ ಇರಬೇಕು. ಆದರೆ ಟೆಂಡರ್ ಪಡೆದ ರಾಜಶ್ರೀ ಕಂಪನಿ ಬಳಿ ಇದ್ದಿದ್ದು ಕೇವಲ 400 ಕೋಟಿ ರೂ. ಅಷ್ಟೇ. ಟೆಂಡರ್ ಮೌಲ್ಯ 1,920 ಕೋಟಿ ಇಡಬೇಕಿತ್ತು. ಕೇವಲ 107 ಕೋಟಿ ರೂ. ಬ್ಲಾಕ್ ಲಿಸ್ಟ್ ನಲ್ಲಿ ಇರುವ ಸಂಸ್ಥೆಗೆ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಸ್ಮಾರ್ಟ್ ಮೀಟರ್ ಗೆ ನಮ್ಮಲ್ಲಿ 8,160 ರೂ. ದರ ಇದೆ. ತಿಂಗಳಿಗೆ ಕೊಡುವ ದರ ಹತ್ತು ವರ್ಷಗಳಿಗೆ ಲೆಕ್ಕ ಹಾಕಿದರೆ ಮೀಟರ್ ವೊಂದಕ್ಕೆ 17 ಸಾವಿರ ರೂ. ಆಗಲಿದೆ. ಬೇರೆ ರಾಜ್ಯಗಳಲ್ಲಿ 7,400 ರೂ.ಯಿಂದ 9,260 ಆಗಲಿದೆ. ಈ ರೀತಿ ಹಗಲು ದರೋಡೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.