ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ (ಜ.12) ಕೈಗೊಂಡಿದ್ದ ಪಿಎಸ್‌ಎಲ್‌ವಿ-ಸಿ62 ರಾಕೆಟ್ ಉಡಾವಣೆ ವಿಫಲಗೊಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಉಡಾವಣೆಯ ವಿಫಲ ಆಗುತ್ತಿದ್ದಂತೆಯೇ ಬಾಹ್ಯಾಕಾಶ ನೌಕೆಯಲ್ಲಿದ್ದ ರಕ್ಷಣಾ ಇಲಾಖೆಯ ಅನ್ವೇಷಾ ಉಪಗ್ರಹ ಸೇರಿದಂತೆ 16 ಉಪಗ್ರಹಗಳೂ ನಾಶವಾಗಿವೆ ಎಂದು ಭಾವಿಸಲಾಗಿತ್ತು. ಆದರೆ, ಈ ಭಾರಿ ವೈಫಲ್ಯದ ನಡುವೆಯೂ, ಅದ್ಭುತವೆಂಬಂತೆ ನೌಕೆಯಲ್ಲಿದ್ದ ಪುಟ್ಟ ಉಪಗ್ರಹವೊಂದು ಬದುಕುಳಿದು ಅಚ್ಚರಿ ಮೂಡಿಸಿದೆ.
ಸ್ಪೇನ್ ಮೂಲದ ‘ಆರ್ಬಿಟಲ್ ಪ್ಯಾರಾಡಿಗ್ಮ್’ ಕಂಪನಿಗೆ ಸೇರಿದ ‘ಕಿಡ್’ (KID – Kestrel Initial Demonstrator) ಎಂಬ ಕ್ಯಾಪ್ಸುಲ್ ಈ ದುರಂತದಲ್ಲೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.
ಏನಿದು ಪವಾಡ? ಬದುಕುಳಿದಿದ್ದು ಹೇಗೆ?
ಸಾಮಾನ್ಯವಾಗಿ ರಾಕೆಟ್ ಉಡಾವಣೆ ವಿಫಲವಾದಾಗ, ವಾತಾವರಣದ ಘರ್ಷಣೆಯಿಂದ ಉಂಟಾಗುವ ವಿಪರೀತ ಶಾಖಕ್ಕೆ (ಸುಮಾರು 2,500 ಡಿಗ್ರಿ ಸೆಲ್ಸಿಯಸ್) ಸಿಲುಕಿ ಉಪಗ್ರಹಗಳು ಸುಟ್ಟು ಕರಕಲಾಗುತ್ತವೆ. ಆದರೆ, ‘ಕಿಡ್’ ಉಪಗ್ರಹದ ವಿನ್ಯಾಸವೇ ಅದರ ಉಳಿವಿಗೆ ಕಾರಣವಾಗಿದೆ.
ವಿಶೇಷ ವಿನ್ಯಾಸ |‘ಕಿಡ್’ ಸಾಮಾನ್ಯ ಉಪಗ್ರಹವಲ್ಲ. ಇದೊಂದು ‘ರೀ-ಎಂಟ್ರಿ ವೆಹಿಕಲ್’ ಅಥವಾ ಮರು-ಪ್ರವೇಶ ವಾಹನ. ಅಂದರೆ, ಬಾಹ್ಯಾಕಾಶಕ್ಕೆ ಹೋಗಿ ಅಲ್ಲಿನ ದತ್ತಾಂಶ ಸಂಗ್ರಹಿಸಿ, ಮತ್ತೆ ಸುರಕ್ಷಿತವಾಗಿ ಭೂಮಿಗೆ ಮರಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿತ್ತು.
ಅಧಿಕ ಉಷ್ಣ ತಡೆದುಕೊಳ್ಳುವ ಶಕ್ತಿ | ಗಗನಯಾತ್ರಿಗಳು ಪ್ರಯಾಣಿಸುವ ನೌಕೆಗಳಂತೆ, ಇದು ವಾತಾವರಣದ ಮರುಪ್ರವೇಶದ ವೇಳೆ ಉಂಟಾಗುವ 300 ರಿಂದ 2,500 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಡೆದುಕೊಳ್ಳುವ ವಿಶೇಷ ಉಷ್ಣ ಕವಚಗಳನ್ನು ಹೊಂದಿತ್ತು. ಹೀಗಾಗಿ ರಾಕೆಟ್ ವಿಫಲವಾಗಿ ಕೆಳಗೆ ಬೀಳುವಾಗಲೂ ಇದು ಸುಟ್ಟುಹೋಗಲಿಲ್ಲ.
ಸಂಸ್ಥೆ ಹೇಳಿದ್ದೇನು? ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್ಬಿಟಲ್ ಪ್ಯಾರಾಡಿಗ್ಮ್ ಸಂಸ್ಥೆ, “ಎಲ್ಲಾ ಪ್ರತಿಕೂಲತೆಗಳ ನಡುವೆಯೂ ನಮ್ಮ ಕಿಡ್ ಕ್ಯಾಪ್ಸೂಲ್, ಪಿಎಸ್‌ಎಲ್‌ವಿ ರಾಕೆಟ್‌ನಿಂದ ಬೇರ್ಪಟ್ಟಿದೆ. ಅಷ್ಟೇ ಅಲ್ಲದೆ ಸ್ವಿಚ್ ಆನ್ ಆಗಿ, ಡೇಟಾವನ್ನು ರವಾನಿಸುವಲ್ಲಿ ಯಶಸ್ವಿಯಾಗಿದೆ,” ಎಂದು ತಿಳಿಸಿದೆ. ಆದಾಗ್ಯೂ, ರಾಕೆಟ್ ವೈಫಲ್ಯದಿಂದಾಗಿ ಅದು ನಿಗದಿತ ಕಕ್ಷೆ ಅಥವಾ ಎತ್ತರವನ್ನು ತಲುಪಲು ಸಾಧ್ಯವಾಗಲಿಲ್ಲ. ಬದಲಿಗೆ ರಾಕೆಟ್ ಅವಶೇಷಗಳೊಂದಿಗೆ ಭೂಮಿಯತ್ತ ಸೆಳೆಯಲ್ಪಟ್ಟಿತು. ಆದರೆ ಬೀಳುವ ರಭಸದಲ್ಲೂ ಅದು ಕೆಲ ನಿಮಿಷಗಳ ಕಾಲ ಅಮೂಲ್ಯವಾದ ದತ್ತಾಂಶವನ್ನು ರವಾನಿಸಿದೆ ಎಂದು ಸಿಇಒ ಫ್ರಾನ್ಸೆಸ್ಕೊ ಕ್ಯಾಸಿಯಾಟೋರ್ ತಿಳಿಸಿದ್ದಾರೆ.
ಮಣ್ಣಾದವು ಉಪಗ್ರಹಗಳು :
ಈ ಯೋಜನೆಯು ವಿಫಲವಾಗಿದ್ದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ಉಡಾವಣೆಯ ಪ್ರಮುಖ ಉದ್ದೇಶ ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದ ‘ಇಒಎಸ್-ಎನ್1’ ಅಥವಾ ‘ಅನ್ವೇಷಾ’ ಎಂಬ ಭೂ ಪರಿವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದಾಗಿತ್ತು. ಇದರ ಜೊತೆಗೆ ಭಾರತದ 7, ಯುರೋಪ್‌ನ 2, ಬ್ರೆಜಿಲ್‌ನ 5 ಮತ್ತು ನೇಪಾಳದ 1 ಉಪಗ್ರಹ ಸೇರಿದಂತೆ ಒಟ್ಟು 16 ಉಪಗ್ರಹಗಳು ಉಡಾವಣೆಯಾಗಿದ್ದವು. ‘ಕಿಡ್’ ಹೊರತುಪಡಿಸಿ ಉಳಿದೆಲ್ಲವೂ ಈ ದುರಂತದಲ್ಲಿ ನಾಶವಾಗಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ : ವಿವೇಕನಗರ ಪೊಲೀಸರ ಕಾರ್ಯಾಚರಣೆ | ರಸ್ತೆಯಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ!



















