ಬೆಂಗಳೂರು: ಚಿನ್ನದ ವ್ಯಾಪಾರಿಯ ಮನೆಯಲ್ಲಿದ್ದ ಬರೋಬ್ಬರಿ 15.15 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಸೆಕ್ಯೂರಿಟಿ ಗಾರ್ಡ್ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ನಗರದಲ್ಲಿನ ಸುರೇಂದ್ರ ಕುಮಾರ್ ಜೈನ್ ಅವರ ಜ್ಯುವೆಲರಿ ಶಾಪ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ವ್ಯಕ್ತಿಯೇ ಕದ್ದು ಪರಾರಿಯಾಗಿದ್ದಾನೆ. ಈ ಘಟನೆ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯ ಮಾಲೀಕ ಊರಿನಿಂದ ಮರಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಚಿನ್ನದ ವ್ಯಾಪಾರಿ ಮನೆಯಲ್ಲಿ ಕಳುವಾಗಿದ್ದು ಬರೋಬ್ಬರಿ 18.4ಕೆಜಿ ಚಿನ್ನ ಎನ್ನಲಾಗಿದೆ. ಇದರಲ್ಲಿ ಸುರೇಂದ್ರ ಕುಮಾರ್ ಜೈನ್ ಕುಟುಂಬಕ್ಕೆ 2.8 ಕೆಜಿ ಚಿನ್ನ ಸೇರಿದೆ. ಅವರ 5 ಸಹೋದರಿಯರಿಗೆ ಸೇರಿದ್ದ ಒಟ್ಟು 2.7 ಕೆಜಿ ಚಿನ್ನ ಹಾಗೂ ವ್ಯಾಪಾರಕ್ಕೆಂದು ತಂದಿದ್ದ 12.8 ಕೆಜಿ ಚಿನ್ನ ಕಳ್ಳತನವಾಗಿದೆ. ಅಲ್ಲದೇ, ಮನೆಯಲ್ಲಿದ್ದ 37.8 ಲಕ್ಷ, ವೈಯಕ್ತಿಕ 3 ಲಕ್ಷ ರೂ. ಹಣವನ್ನು ಕೂಡ ದೋಚಿ ಪರಾರಿಯಾಗಿದ್ದಾನೆ. ಅಂದರೆ, ಒಟ್ಟು 18 437 ಕೆಜಿ ಚಿನ್ನ, 40.80 ಲಕ್ಷ ನಗದು ಸೇರಿದಂತೆ ಒಟ್ಟು 15.15 ಕೋಟಿ ರೂ. ಕದ್ದು ಪರಾರಿಯಾಗಿದ್ದಾನೆ ಎಂದು ಮಾಲೀಕರು ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿನಮ್ರಾಜ್ ನೇಪಾಳ ಮೂಲದವನಾಗಿದ್ದಾನೆ. ಜ್ಯುವೆಲರಿ ಶಾಪ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಈತನಿಗೆ ಮಾಲೀಕರೇ ತಮ್ಮ ನಿವಾಸದ ಬಳಿ ಪಾರ್ಕಿಂಗ್ನ ಸೆಕ್ಯೂರಿಟಿ ಮನೆ ನೀಡಿದ್ದರು. ಆರು ತಿಂಗಳಿಂದ ಪತ್ನಿ ಜೊತೆ ಮಾಲೀಕರ ನಿವಾಸದ ಸೆಕ್ಯೂರಿಟಿ ರೂಂನಲ್ಲಿ ನಮ್ರಾಜ್ ವಾಸಿಸುತ್ತಿದ್ದ. ಸೆಕ್ಯೂರಿಟಿ ಕೆಲಸದೊಂದಿಗೆ ಮನೆಯಲ್ಲೂ ಕೆಲಸ ಮಾಡುತ್ತಿದ್ದ. ಸಂದರ್ಭದಲ್ಲಿ ಚಿನ್ನಾಭರಣದ ಬಗ್ಗೆ ತಿಳಿದುಕೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.